ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೌಡಾಯಿಸುತ್ತಿರುವುದರಿಂದ ನಿಗದಿತ ಸ್ಥಳ ತಲುಪಲು ಆಗದೇ ಪರದಾಡುವಂತಾಗಿದೆ.
ಕುಂಭಮೇಳಕ್ಕೆ ದೇಶಾದ್ಯಂತ ಜನರು ಹರಿದು ಬರುತ್ತಿದ್ದಾರೆ. ವಿಮಾನ ದರ ಹೆಚ್ಚಳದಿಂದ ಬಹುತೇಕ ಮಂದಿ ಸ್ವಂತ ವಾಹನಗಳ ಮೂಲಕ ರಸ್ತೆ ಮಾರ್ಗವಾಗಿ ಆಗಮಿಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಆರಂಭವಾಗಿದ್ದು, ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ.
ಹೌದು, ಪ್ರಯಾಗ್ ರಾಜ್ ಗೆ ಹೊಗುವ ಒಟ್ಟಾರೆ 300 ಕಿ.ಮೀ. ಉದ್ದದಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ಸುಮಾರು 48 ಗಂಟೆಗಳಿಂದ ವಾಹನಗಳು ಮುಂದೆ ಹೋಗಲು ಆಗದೇ ನಿಂತಿವೆ ಎಂಬ ವರದಿಗಳು ಬಂದಿವೆ.
ಉತ್ತರ ಪ್ರದೇಶಕ್ಕೆ ಹೊಂದಿಕೊಂಡಿರುವ ಮಧ್ಯಪ್ರದೇಶ ಸರ್ಕಾರ ಕುಂಭಮೇಳಕ್ಕೆ ಹೋಗುವ ವಾಹನಗಳನ್ನು ತಡೆದು ನಿಲ್ಲಿಸುತ್ತಿವೆ. ಈ ಸಮಯದಲ್ಲಿ ಪ್ರಯಾಗ್ ರಾಜ್ ಗೆ ತೆರಳಲು ಅಸಾಧ್ಯ. 200ರಿಂದ 300 ಕಿ.ಮೀ. ವಾಹನ ದಟ್ಟಣೆ ಉಂಟಾಗಿದ್ದು 48 ಗಂಟೆಗಳಿಂದ ವಾಹನ ಸವಾರರು ರಸ್ತೆ ಮಧ್ಯದಲ್ಲೇ ನಿಂತಿದ್ದಾರೆ ಎಂದು ವರದಿಗಳು ಹೇಳಿವೆ.
ವಾಹನಗಳು 50 ಕಿ.ಮೀ. ದೂರ ಪ್ರಯಾಣಿಸಬೇಕಾದರೆ 10ರಿಂದ 12 ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಪ್ರಯಾಗ್ ರಾಜ್ ನಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ವಾಹನ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ ಬಹುತೇಕ ವಾಹನಗಳು ತ್ರಿವಳಿ ಸಂಗಮದಿಂದ ಸುಮಾರು 6 ಕಿ.ಮೀ. ದೂರದಲ್ಲೇ ವಾಹನ ನಿಲ್ಲಿಸಿ ಕಾಲುದಾರಿಯಲ್ಲಿ ಸಾಗಬೇಕಾಗಿದೆ.
ವಾಹನಗಳಲ್ಲಿ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ವಾಹನ ಸವಾರರು ಸಾಧ್ಯವಾದಷ್ಟು ಹತ್ತಿರ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಪ್ರಯಾಗ್ ರಾಜ್ ಸಂಪರ್ಕಿಸುವ ನಾಲ್ಕು ಮಾರ್ಗಗಳಲ್ಲಿ ಸುಮಾರು 25 ಕಿ.ಮೀ. ದೂರದವರೆಗೆ ಟ್ರಾಫಿಕ್ ಜಾಮ್ ಸಂಭವಿಸಿದ್ದು, ರಸ್ತೆಯಲ್ಲೇ ವಾಹನ ಸವಾರರು ಎರಡು ದಿನ ಕಳೆಯುವ ಪರಿಸ್ಥಿತಿಗೆ ಸಿಲುಕಿದ್ದಾರೆ.