ಪಾಕಿಸ್ತಾನ ವಾಯುಪಡೆಯು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಪಾಕಿಸ್ತಾನದ ಜೆ-17 ಯುದ್ಧ ವಿಮಾನಗಳು ಎಂಟು LS-6 ಬಾಂಬ್‌ಗಳನ್ನು ಹಾಕಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ ಎಂದು ವರದಿಯಾಗಿದೆ.
ರಕ್ಷಣಾ ತಂಡಗಳು ಅವಶೇಷಗಳ ಅಡಿಯಲ್ಲಿ ಶವಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಘಟನೆ ನಡೆದಾಗ ಜನರು ಚೀರಾಡುತ್ತಿರುವ ದೃಶ್ಯದ ವೀಡಿಯೊ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖೈಬರ್ ಪಖ್ತುಂಖ್ವಾದಲ್ಲಿ ಹಿಂದೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಪಾಕಿಸ್ತಾನದಲ್ಲಿ ಭಯೋತ್ಪಾದ ದಾಳಿ ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ.42 ಹೆಚ್ಚಳವಾಗಿದೆ. ಈ ವರ್ಷ ಕನಿಷ್ಠ 74 ಭಯೋತ್ಪಾದಕ ದಾಳಿಗಳು ದಾಖಲಾಗಿದ್ದು, 90 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಖೈಬರ್ ಪಖ್ತುಂಖ್ವಾದ ಪ್ರಾಂತ್ಯದಲ್ಲಿ ಹೆಚ್ಚು ದಾಳಿ ನಡೆದರೆ ನಂತರದ ಸ್ಥಾನದಲ್ಲಿ ಬಲೂಚಿಸ್ತಾನ್ ಇದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಾನುವಾರ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನ ಸೇನೆ 7 ಬಂಡುಕೋರರನ್ನು ಕೊಂದು ಹಾಕಿದೆ. ಗುಪ್ತಚರ ಮಾಹಿತಿ ಆಧರಿಸಿ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನಕ್ಕೆ ಸೇರಿದ ಏಳು ಉಗ್ರರು ಹತರಾಗಿದ್ದಾರೆ ಎಂದು ಸೇನೆ ತಿಳಿಸಿದೆ.
ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಉಗ್ರರ ಇರುವಿಕೆ ತಿಳಿದ ನಂತರ ದಕ್ಷಿಣ ವಜೀರಿಸ್ತಾನದ ಗಡಿಯಲ್ಲಿರುವ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಭದ್ರತಾ ಪಡೆಗಳು ಹೊಡೆದುರುಳಿಸಿದ ಏಳು ಜನರಲ್ಲಿ ಮೂವರು ಅಫ್ಘಾನ್ ಪ್ರಜೆಗಳು ಮತ್ತು ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ಸೇರಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ.