ಬೆಳಗಾವಿ: ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಗಳಲ್ಲಿ ಪದಕ ವಿಜೇತ ಸಾಧಕ ಕ್ರೀಡಾಪಟುಗಳಿಗೆ ಸರ್ಕಾರದ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ನೀಡುವ ಮೂಲಕ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಗುರುವಾರ ಮೇಲ್ಮನೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ನ ಐವಾನ್ ಡಿಸೋಜ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಪೊಲೀಸ್ ಇಲಾಖೆಯ ಡಿವೈಎಸ್ಪಿ, ಸಬ್ ಇನ್ಸ್‌ಪೆಕ್ಟರ್ ಹಾಗೂ ಕಾನ್ಸ್‌ಟೇಬಲ್‌ಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ನೇಮಕಾತಿಯಲ್ಲಿ ಸಾಧಕ ಕ್ರೀಡಾಪಟುಗಳಿಗೆ ಶೇ 3% ಮೀಸಲಾತಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಅಲ್ಲದೇ ಇತರ ಇಲಾಖೆಗಳ ನೇಮಕಾತಿಯಲ್ಲಿ ಸಾಧಕ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿ ನೀಡುವ ನಿಯಮಗಳನ್ನು ರೂಪಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಯಏಷಿಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಗಳಲ್ಲಿ ಪದಕ ವಿಜೇತ ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುಂಪು-ಎ, ಗುಂಪು-ಬಿ ಮತ್ತು ಇತರೆ ಹುದ್ದೆಗಳಿಗೆ ವಿಶೇಷ ನೇಮಕಾತಿ ನಿಯಮದಡಿ ಒಟ್ಟು 13 ಕ್ರೀಡಾಪಟುಗಳಿಗೆ ಅವಕಾಶ ಪತ್ರಗಳನ್ನು ವಿತರಿಸಲಾಗಿದೆ.
ಈ ಪೈಕಿ 10 ಕ್ರೀಡಾಪಟುಗಳನ್ನು ವಿವಿಧ ಇಲಾಖೆಗಳಲ್ಲಿ ಗುಂಪು-ಬಿ ವೃಂದದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿದ್ದು ಉಳಿದ 3 ಹುದ್ದೆಗಳ ನೇಮಕಾತಿಯು ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಯುವ ಸಬಲೀಕರಣ 5 ಮತ್ತು ಕ್ರೀಡಾ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಲಾಗುತ್ತಿರುವ ದಸರಾ ಕ್ರೀಡಾಕೂಟವನ್ನು ತಾಲ್ಲೂಕು,ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿಭಾಗ ಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗುವ ದಸರಾ ಕ್ರೀಡಾಕೂಟ ಸಿ.ಎಂ. ಕಪ್ ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಸಿ.ಎಂ. ಕಪ್ ಆಯೋಜಿಸಲು ರಾಜ್ಯ ವಲಯದಲ್ಲಿ 2025-26ನೇ ಸಾಲಿನಲ್ಲಿ ರೂ 607.81 ಲಕ್ಷಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.


