ಸರ್ಕಾರಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಶಿಕ್ಷಕ ಹಾಗೂ ಆತನ ಪತ್ನಿ ಜನಿಸಿ 3 ದಿನಗಳಷ್ಟೇ ಆಗಿದ್ದ ನಾಲ್ಕನೇ ಮಗುವನ್ನು ಕಾಡಿನಲ್ಲಿ ಬಿಸಾಕಿದ ಅಮಾನವೀಯ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಆದರೆ ಮಗು ಪವಾಡಸದೃಶವಾಗಿ ಪಾರಾಗಿ ಅಚ್ಚರಿ ಮೂಡಿಸಿದೆ.
ಚಿಂದ್ವಾರಾ ಗ್ರಾಮದ ನಂದಾವಡಿ ಕಾಡಿನಲ್ಲಿ ದಟ್ಟ ಚಳಿ ಕಲ್ಲುಗಳ ಮೇಲೆ ಬಿದ್ದು ಇರುವೆಗಳು ಕಚ್ಚಿದ್ದರಿಂದ ಆದ ಗಾಯದಿಂದ ನರಳುತ್ತಿದ್ದ ಮಗುವನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಹೆತ್ತವರಿಂದಲೇ ನರಕ ನೋಡಿದ ಮಗು ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಿ ಸಾವನ್ನು ಗೆದ್ದು ಬಂದಿದೆ.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವ ತಂದೆ ಬಬ್ಲು ದಂಡೋಲಿಯಾ ಮತ್ತು ಪತ್ನಿ ರಾಜ್ ಕುಮಾರಿ ದಂಡೋಲಿಯಾ ಈಗಾಗಲೇ ಮೂರು ಮಗು ಹೊಂದಿದ್ದರು. ರಾಜ್ಯ ಸರ್ಕಾರದ ಹೊಸ ನಿಯಮದಂತೆ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದಿಲ್ಲ. ಮೊದಲೇ ಮಕ್ಕಳಿದ್ದರೆ ವಿನಾಯಿತಿ ದೊರೆಯಲಿದ್ದು, ಉದ್ಯೋಗದಲ್ಲಿದ್ದಾಗ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ ಉದ್ಯೋಗ ಹಾಗೂ ಬಡ್ತಿ ಕಡಿತವಾಗಲಿದೆ.
ಸರ್ಕಾರದ ನೂತನ ಆದೇಶದ ಹಿನ್ನೆಲೆಯಲ್ಲಿ ಪತ್ನಿ ಗರ್ಭಿಣಿ ಆಗಿದ್ದರೂ ವಿಷಯವನ್ನು ಮುಚ್ಚಿಟ್ಟಿದ್ದರು. ಆರೋಗ್ಯವಂತ ಮಗು ಜನಿಸುತ್ತಿದ್ದಂತೆ ಸರ್ಕಾರಿ ಉದ್ಯೋಗ ಉಳಿಸಿಕೊಳ್ಳಲು ದಂಪತಿ ಮಗುವನ್ನು ಕೊಲ್ಲಲು ನಿರ್ಧರಿಸಿದ್ದಾರೆ. ಆದರೆ ಕೊಲ್ಲಲು ಮನಸ್ಸು ಬಾರದೇ ದಟ್ಟ ಕಾಡಿನಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾರೆ.
ಸೆಪ್ಟೆಂಬರ್ 23ರಂದು ರಾಜಕುಮಾರಿ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಜಿನಿಸಿದ ಕೂಡಲೇ ಸಮೀಪದ ಕಾಡಿಗೆ ಹೊಯ್ದು ಕಲ್ಲುಗಳ ಮೇಲೆ ಬಿಟ್ಟಿದ್ದಾರೆ.
ಮಾರನೇ ದಿನ ನಂದಾವಡಿ ಕಾಡಿನಲ್ಲಿ ಹೋಗುತ್ತಿದ್ದ ಗ್ರಾಮಸ್ಥರು ಮಗು ಅಳುವುದನ್ನು ಕೇಳಿ ಅಚ್ಚರಿಗೊಂಡಿದ್ದಾರೆ. ಆರಂಭದಲ್ಲಿ ಯಾವುದೋ ಪ್ರಾಣಿ ಕೂಗುತ್ತಿರಬೇಕು ಎಂದು ಭಾವಿಸಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಎಳೆ ಮಗು ಕಂಡು ಆಘಾತಕ್ಕೆ ಒಳಗಾಗಿದ್ದಾರೆ.
ಮಗುನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಿದ ವೈದ್ಯರು ಚಳಿ ಹಾಗೂ ಇರುವೆ ಕಡಿತದಿಂದ ಮಗುವಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಆದರೆ ಇಂತಹ ಕಠಿಣ ಪರಿಸ್ಥಿತಿಯಲ್ಲೂ ಮಗು ಉಳಿದುಕೊಂಡಿರುವುದು ಪವಾಡವೇ ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಗುವಿನ ತಂದೆ ಹಾಗೂ ತಾಯಿಯ ವಿರುದ್ಧ ಹಲವು ಸೆಕ್ಷನ್ ಅಡಿ ಕೇಸು ದಾಖಲಿಸಿದ್ದಾರೆ.