Menu

ಮಂತ್ರಾಲಯಕ್ಕೆ  3.39 ಕೋಟಿ ನಗದು 1.280 ಕೆಜಿ ಬೆಳ್ಳಿ ಕಾಣಿಕೆ: ಭಕ್ತರಿಂದ ಎಣಿಕೆ ಫೋಟೊ ವೈರಲ್!

mantralya hundi

ರಾಯಚೂರು: ಭಕ್ತರ ಕಲ್ಪವೃಕ್ಷ‌ ಮಂತ್ರಾಲಯದ ತುಂಗಾತೀರದಲ್ಲಿ ನೆಲೆಸಿರುವ ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ಕೋಟ್ಯಂತರ ರೂ ಕಾಣಿಕೆ ಹರಿದು ಬಂದಿದೆ.

ಈ ತಿಂಗಳಲ್ಲಿ ರಾಯರ ಉತ್ಸವದ ಹಿನ್ನೆಲೆಯಲ್ಲಿ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ಕಾಣಿಕೆಯಾಗಿ ಕೋಟಿಗಟ್ಟಲೆ ಹಣ ಮತ್ತು ಚಿನ್ನಾಭರಣವನ್ನು ಸಮರ್ಪಿಸಿದ್ದಾರೆ.

ಕಳೆದ ಶುಕ್ರವಾರ ಮಾರ್ಚ್ 21 (30 ದಿನಗಳು)ರಂದು ಹುಂಡಿ ತೆರೆದು ಎಣಿಕೆ ಮಾಡಲಾಗಿದ್ದು ಒಟ್ಟು 3 ಕೋಟಿ 39 ಲಕ್ಷ 35 ಸಾವಿರದ 121 ರೂ ಹಣ ಸಂಗ್ರಹವಾಗಿದೆ.

ಇದರಲ್ಲಿ 9 ಲಕ್ಷ 34 ಸಾವಿರದ 500 ರೂ ನಾಣ್ಯಗಳು, 3 ಕೋಟಿ 48 ಲಕ್ಷ 69 ಸಾವಿರದ 621 ರೂಪಾಯಿ ನೋಟುಗಳಿವೆ. ಇನ್ನು 37.200 ಗ್ರಾಂ ಚಿನ್ನ, 1.280 ಕೆಜಿ ಬೆಳ್ಳಿ ಕಾಣಿಕೆಯನ್ನು ಹುಂಡಿಗೆ ಭಕ್ತರು ಹಾಕಿದ್ದಾರೆ ಎಂದು ಶ್ರೀಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಎಣಿಸಲು ನೂರಾರು ಜನ:

ಶ್ರೀಮಠದ ಹುಂಡಿ ಎಣಿಕೆ ಕಾರ್ಯದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಸಾಲಾಗಿ ಕುಳಿತು ನೂರಾರು ಜನ ಹಣ ಎಣಿಸುತ್ತಿರುವುದು ವಿಡಿಯೋದಲ್ಲಿ ಗಮನ ಸೆಳೆಯುತ್ತಿದೆ.

ಭಕ್ತರ ಸಂಖ್ಯೆಯಲ್ಲಿ ಏರಿಕೆ:

ಮಾರ್ಚ್ 1ರಿಂದ 6ರವರೆಗೆ ಆರು ದಿನಗಳ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಗುರು ವೈಭವೋತ್ಸವ ಅದ್ಧೂರಿ ನೆರವೇರಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಗುರುವೈಭವೋತ್ಸವ ಅದ್ಧೂರಿಯಾಗಿ ನಡೆದಿದ್ದು, ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದರು. ಗುರುವೈಭವೋತ್ಸವದಲ್ಲಿ ಆಂಧ್ರ ಪ್ರದೇಶದ ಶಿಕ್ಷಣ ಮತ್ತು ಐಟಿ ಸಚಿವ ನಾರಾ ಲೋಕೇಶ್ ಭಾಗವಹಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ (ಶ್ರೀ ರಾಯರ) ದರ್ಶನ ಪಡೆದುಕೊಂಡಿದ್ದರು.

ಮಾರ್ಚ್ 6ರಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ 430ನೇ ವರ್ಧಂತಿ ಮಹೋತ್ಸವವು ಸಂಭ್ರಮ ಸಡಗರದಿಂದ ನೆರವೇರಿತು. ರಾಯರ ಮೂಲ ಬೃಂದಾವನಕ್ಕೆ ವಿಶೇಷವಾದ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಈ ವೇಳೆ ಕೂಡ ಮಠಕ್ಕೆ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದಿದ್ದಾರೆ.

Related Posts

Leave a Reply

Your email address will not be published. Required fields are marked *