ಹರಿಯಾಣದ ಫರಿದಾಬಾದ್ ನ ಮನೆಯೊಂದರಲ್ಲಿ 360 ಕೆಜಿ ಸ್ಫೋಟಕ ಹಾಗೂ ಅಪಾರ ಪ್ರಮಾಣದ ರೈಫಲ್ಸ್ ಮತ್ತು ಮದ್ದುಗುಂಡುಗಳನ್ನು ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಮನೆಯಲ್ಲಿ 2563 ಕೆಜಿ ಸ್ಫೋಟಕಗಳು ಪತ್ತೆಯಾಗಿವೆ.
ಹರಿಯಾಣದ ಫರಿದಾಬಾದ್‌ನಲ್ಲಿ ವೈದ್ಯ ಡಾ, ಮುಜಾಮಿಲ್ ಶಕೀಲ್ ಗೆ ಎರಡೂ ಮನೆಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದು, ಎರಡೂ ಮನೆಗಳಿಂದ ಒಟ್ಟಾರೆ 2900 ಕೆಜಿ ಸ್ಫೋಟಕಗಳು ಮತ್ತು ಅಪಾರ ಪ್ರಮಾಣದ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳು ಪತ್ತೆಯಾಗಿವೆ.
ವೈದ್ಯರ ಮೇಲೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಕಾರಣಕ್ಕೆ ವೈದ್ಯ ವೃತ್ತಿ ತೊರೆದು ಉಗ್ರರ ಗುಂಪು ಸೇರಿದ್ದ ಮುಜಾಮಿಲ್ ಶಕೀಲ್ ಮನೆಯಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಲಾಗಿತ್ತು ಎಂದು ತಿಳಿದು ಬಂದಿದೆ.
ಜಮ್ಮುಕಾಶ್ಮೀರ ಮೂಲದ ವೈದ್ಯ ಮುಜಾಮಿಲ್ ಶಕೀಲ್ ವಿವಿಧ ರಾಜ್ಯಗಳಿಗೆ ಉಗ್ರರ ದಾಳಿಯ ರೂಪುರೇಷೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದ. ಈತನ ಮನೆಯಲ್ಲಿ ಪತ್ತೆಯಾದ ಸ್ಫೋಟಕಗಳು ಅಮೋನಿಯಂ ನೈಟ್ರೆಟ್ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ವೈದ್ಯನ ಬಂಧಿಸಿ ವಿಚಾರಣೆಗೊಳಪಡಿಸಿದ ಬೆನ್ನಲ್ಲೇ ಜಮ್ಮು ಕಾಶ್ಮೀರ ಮತ್ತು ಹರಿಯಾಣ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದಾಗ ಮೊದಲ ಮನೆಯಲ್ಲಿ 360 ಕೆ.ಜಿ ಅಮೋನಿಯಂ ನೈಟ್ರೇಟ್ ಸ್ಫೋಟಕ, ಎರಡು ರೈಫಲ್ ಹಾಗೂ ಮದ್ದುಗುಂಡುಗಳನ್ನು ಪತ್ತೆ ಹಚ್ಚಿದ್ದರು.
ನಂತರ ಈತನಿಗೆ ಸೇರಿದ ಮತ್ತೊಂದು ಮನೆಯ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ 2500ಕ್ಕೂ ಅಧಿಕ ಕೆಜಿ ತೂಕದ ಸ್ಫೋಟಕಗಳು ಪತ್ತೆಯಾಗಿವೆ.
ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿದ್ದ ಹಿನ್ನೆಲೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಕಾಶ್ಮೀರಿ ಮೂಲದ ವೈದ್ಯ ಆದಿಲ್ ಅಹ್ಮದ್ ರಾಥರ್‌ನನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ವೈದ್ಯ ನೀಡಿದ ಮಾಹಿತಿ ಆಧರಿಸಿ ಹರಿಯಾಣ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ದಾಳಿ ನಡೆಸಿ ಭಾರೀ ಪ್ರಮಾಣದ ಸ್ಫೋಟಕ ಹಾಗೂ ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಫರಿದಾಬಾದ್ ಪೊಲೀಸ್ ಕಮಿಷನರ್ ಸತೇಂದರ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.


