ಅನ್ ಕ್ಯಾಪ್ಡ್ (ಭಾರತ ತಂಡದಲ್ಲಿ ಸ್ಥಾನ ಪಡೆಯದ) ಯುವ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮ ಅವರಿಗೆ ತಲಾ 14.20 ಕೋಟಿ ರೂ. ವಿನಿಯೋಗಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸ ಬರೆದಿದೆ.
ದುಬೈನಲ್ಲಿ ಮಂಗಳವಾರ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಬ್ಬರು ಯುವ ಆಟಗಾರರಿಗೆ 28.40 ಕೋಟಿ ರೂ. ವೆಚ್ಚ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಕಳೆದ ಬಾರಿ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್ ಕೆ ತಂಡದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದು, ಅನುಭವಿ ಆಟಗಾರರ ಬದಲು ಯುವ ಆಟಗಾರರಿಗೆ ದೊಡ್ಡ ಮೊತ್ತ ವಿನಿಯೋಗಿಸಿ ಅಚ್ಚರಿ ಮೂಡಿಸಿದೆ.
14.20 ಕೋಟಿ ರೂ.ಗೆ ಚೆನ್ನೈ ಪಾಲಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮ ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತಕ್ಕೆ ಮಾರಾಟವಾದ ಆಟಗಾರರು ಎಂಬ ಇತಿಹಾಸ ನಿರ್ಮಿಸಿದರು.
ಕಾಶ್ಮೀರದ ಅಕೀಬ್ ದರ್ 8.40 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡರೆ, ಮುಕುಲ್ ಚೌಧರಿ 2.60 ಕೋಟಿ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್, ನಮನ್ ತಿವಾರಿ 1 ಕೋಟಿ ರೂ.ಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾದರು. ಈ ಮೂಲಕ ಅತೀ ದೊಡ್ಡ ಮೊತ್ತ ಪಡೆದ ಅನ್ ಕ್ಯಾಪ್ಡ್ ಆಟಗಾರರು ಎನಿಸಿಕೊಂಡರು.
ಮಿನಿ ಹರಾಜಿನಲ್ಲಿ 369 ಆಟಗಾರರ ಹೆಸರು ಘೋಷಿಸಲಾಗಿದ್ದು, ಆಸ್ಟ್ರೇಲಿಯಾದ ಕೆಮರೂನ್ ಗ್ರೀನ್ 25.20 ಕೋಟಿ ರೂ. ಮತ್ತು ಮತೀಶ ಪತಿರಾಣ 18 ಕೋಟಿ ರೂ.ಗೆ ಕೆಕೆಆರ್ ತಂಡದ ಪಾಲಾದರು. ಈ ಮೂಲಕ ಅತ್ಯಂತ ದುಬಾರಿ ವಿದೇಶೀ ಆಟಗಾರರು ಎಂಬ ಗೌರವಕ್ಕೆ ಪಾತ್ರರಾದರು. ಇತ್ತೀಚೆಗೆ ನಿವೃತ್ತಿ ವಾಪಸ್ ಪಡೆದು ಭಾರತ ವಿರುದ್ಧ ಶತಕ ಸಿಡಿಸಿದ್ದ ಕ್ವಿಂಟನ್ ಡಿ ಕಾಕ್ ಮೂಲಧನ 1 ಕೋಟಿಗೆ ಮುಂಬೈ ಇಂಡಿಯನ್ಸ್ ಗೆ ಮರಳಿದರು.
ವೆಂಕಟೇಶ್ ಅಯ್ಯರ್ 7 ಕೋಟಿಗೆ ಆರ್ ಸಿಬಿ ಪರ ಹಾಗೂ ರವಿ ಬಿಶ್ನೋಯಿ 7.20 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾದರು.


