Menu

ಕೋಲಾರ ಪತ್ರಕರ್ತರ ಸಂಘದ ಕಲ್ಯಾಣನಿಧಿಗೆ ಮುಖ್ಯಮಂತ್ರಿಗಳಿಂದ 25 ಲಕ್ಷ ರೂ. 

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸ್ಥಾಪಿಸಿರುವ ಕಾರ್ಯನಿರತ ಪತ್ರಕರ್ತರ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ  ಮಂಜೂರು ಮಾಡಿದ್ದ 25 ಲಕ್ಷರೂ ಅನುದಾನವು ಸಂಘದ ಕಲ್ಯಾಣನಿಧಿ ಖಾತೆಗೆ ಬಿಡುಗಡೆಯಾಗಿದೆ.

2022 ಫೆಬ್ರವರಿ 17 ರಂದು ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯ ಪದಾಧಿಕಾರಿಗಳ ತಂಡವು ಆಯ್ಕೆಯಾಗಿದ್ದ ಸಂದರ್ಭದಲ್ಲಿ ಪತ್ರಕರ್ತರ ಆಪತ್ಕಾಲೀನ ಸಂದರ್ಭದಲ್ಲಿ ಆಪದ್ಧನವಾಗಿ ಒಂದು ಕೋಟಿ ರೂ. ಕಲ್ಯಾಣನಿಧಿಯನ್ನು ಸ್ಥಾಪನೆ ಮಾಡುವುದಾಗಿ ಘೋಷಿಸಿದರು. ಇದಕ್ಕೆ ಪೂರಕವಾಗಿ 2022ರ ಜುಲೈ 1 ರಂದು ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಸಂಘದ ಮನವಿ ಮೇರೆಗೆ ಕಲ್ಯಾಣನಿಧಿಗೆ ಮುಖ್ಯಮಂತ್ರಿಗಳಿಂದ ಅನುದಾನ ದೊರಕಿಸುವ ಭರವಸೆ ನೀಡಿದ್ದರು.

ಇದುವರೆಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಸ್ವಂತ ಸಂಪನ್ಮೂಲ ಹಾಗೂ ಪತ್ರಕರ್ತರಾದ ಕೋಲಾರದ ಪಾ.ಶ್ರೀ.ಅನಂತರಾಮ್, ಮಾಲೂರಿನ ಎಸ್.ವಿ.ಲೋಕೇಶ್, ಬಂಗಾರಪೇಟೆಯ ಎಸ್.ಪಿ.ವೆಂಕಟೇಶ್, ಉದ್ಯಮಿ ಅಬ್ದುಲ್ ಸುಬಾನ್ ಮತ್ತು ಕೋಲಾರ ಪತ್ರಕರ್ತರ ಕ್ರೀಡಾತಂಡದ ದೇಣಿಗೆಯನ್ನು ಒಟ್ಟುಗೂಡಿಸಿ ಇದುವರೆಗೂ 5 ಲಕ್ಷರೂ, ನಿಧಿ ಸಂಗ್ರಹಿಸಿದೆ. ಅದರೊಂದಿಗೆ ಇದೀಗ ಮುಖ್ಯಮಂತ್ರಿಗಳಿಂದ ಬಿಡುಗಡೆಯಾಗಿರುವ ಅನುದಾನವು ಸೇರಿ ಕಲ್ಯಾಣನಿಧಿಯ ಒಟ್ಟು ಮೊತ್ತ 30 ಲಕ್ಷರೂ. ಗಳಾಗಿದೆ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದ್ದಾರೆ.

ಇದುವರೆಗೂ ಸಂಗ್ರಹವಾಗಿರುವ ಕಲ್ಯಾಣನಿಧಿಯ 30ಲಕ್ಷ ರೂಗಳನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಇರಿಸಿ ಅದರಿಂದ ಬರುವ ಬಡ್ಡಿಯಲ್ಲಿ ಪತ್ರಕರ್ತರ ಆಪತ್ಕಾಲೀನ ಸಂದರ್ಭದಲ್ಲಿ ನೆರವು ನೀಡಲು ಸೋಮವಾರ ನಡೆದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಕಲ್ಯಾಣನಿಧಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ಕಲ್ಯಾಣನಿಧಿಯ ಸಭೆಯಲ್ಲಿ ಬಿ.ವಿ.ಗೋಪಿನಾಥ್, ಎಸ್.ಕೆ.ಚಂದ್ರಶೇಖರ್, ಎ.ಜಿ.ಸುರೇಶ್ ಕುಮಾರ್, ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಕೆ.ಎಸ್.ಗಣೇಶ್, ವಿ.ಮುನಿರಾಜು ಮತ್ತು ಪಾ.ಶ್ರೀ.ಅನಂತರಾಮ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *