Tuesday, February 10, 2026
Menu

24 ಕೊಲೆ ಕೇಸ್‌: ಬಿಹಾರ ಆರೋಪಿಗಳಾದ ತಂದೆ, ಮಗ ಬೆಂಗಳೂರಿನಲ್ಲಿ ಅರೆಸ್ಟ್‌

24 ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಬಿಹಾರದ ಅಪ್ಪ ಮಗನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ  ಬೇಕಾಗಿದ್ದ ಆರೋಪಿಗಳು ಒಂದು ವರ್ಷದಿಂದ ಬೆಂಗಳೂರಿನಲ್ಲಿ ಅಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ಮಣಿಕ್ ಸಿಂಗ್ ಹಾಗೂ ಆತನ ತಂದೆ ಮನೋಜ್ ಸಿಂಗ್ ಎಂದು ಗುರುತಿಸಲಾಗಿದೆ. ಬಿಹಾರದ ಸ್ಪೆಷಲ್ ಟಾಸ್ಕ್ ಫೋರ್ಸ್‌ ಕಾರ್ಯಾಚರಣೆಯೊಂದಿಗೆ ಬೆಂಗಳೂರಿನ ರಾಜ್ಯ ಗುಪ್ತಚರ ಪೊಲೀಸ್ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ ಎಂಟು ಡೊಂಗಲ್, ಒಂಬತ್ತು ಮೊಬೈಲ್ ಫೋನ್, ಮೂರು ಕೀಪ್ಯಾಡ್ ಫೋನ್ ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪ್ಪ ಮಗ 24 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರ ವಿರುದ್ಧ 40ಕ್ಕೂ ಹೆಚ್ಚು ಪ್ರಕರಣಗಳಿವೆ. ೨೪ ಕೊಲೆ ಕೇಸ್‌ಗಳಿದ್ದು, ದರೋಡೆ, ಡಕಾಯಿತಿ, ಬೆದರಿಕೆ, ಹಫ್ತಾ ವಸೂಲಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಗಳ ಉಲ್ಲಂಘನೆ ಪ್ರಕರಣಗಳೂ ಇವೆ. ಆರೋಪಿಗಳು ಪಾಟ್ನಾದ ನಿವಾಸಿಗಳಾಗಿದ್ದು, ಬಿಹಾರ ಮಾತ್ರವಲ್ಲದೆ ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲೂ ಇವರ ವಿರುದ್ಧ ಕೇಸ್‌ಗಳು ಇವೆ.

ಆರೋಪಿಗಳಲ್ಲಿ ಓರ್ವನ ತಲೆಗೆ ಬಿಹಾರ ಪೊಲೀಸರು ಮೂರು ಲಕ್ಷ ಹಾಗೂ ಮತ್ತೊಬ್ಬನ ತಲೆಗೆ 1 ಲಕ್ಷ ಬಹುಮಾನ ಘೋಷಿಸಿದ್ದರು. ಮಣಿಕ್ ಕಳೆದೊಂದು ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ, ತಂದೆ ಮನೋಜ್ ಸಿಂಗ್ ಆಗಾಗ ಭೇಟಿ ಮಾಡುತ್ತಿದ್ದ. ಕಳೆದ ವರ್ಷ ಇವರಿಬ್ಬರು ಸೇರಿ ಪಾಟ್ನಾದಲ್ಲಿ ಮನೀಶ್‌ ಕುಮಾರ್ ಎಂಬಾತನ ಕೊಲೆ ಮಾಡಿದ್ದರು. ಇವರಿಗೆ ಬೆಂಗಳೂರಿನಲ್ಲಿ ಆಶ್ರಯ ಹಾಗೂ ಇತರ ಸವಲತ್ತು ನೀಡಿದ ವ್ಯಕ್ತಿಗಳಿಗಾಗಿ ಬಿಹಾರ ಪೊಲೀಸರು ಬಲೆ ಬೀಸಿದ್ದಾರೆ.

Related Posts

Leave a Reply

Your email address will not be published. Required fields are marked *