ಬೆಂಕಿಗೆ ಆಹುತಿಯಾದ ಬೆಂಗಳೂರಿಗೆ ಬರುತ್ತಿದ್ದ ಆಂಧ್ರಪ್ರದೇಶದ ಖಾಸಗಿ ಬಸ್ ನಲ್ಲಿ 46 ಲಕ್ಷ ರೂ. ಮೌಲ್ಯದ 234 ಸ್ಮಾರ್ಟ್ ಫೋನ್ ಗಳು ಇದ್ದವು ಎಂಬುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಶುಕ್ರವಾರ ಬೆಳಿಗ್ಗೆ ಕರ್ನೂಲ್ ನಿಂದ 20 ಕಿ.ಮೀ. ದೂರದಲ್ಲಿ ಬೈಕ್ ಡಿಕ್ಕಿಯಾಗಿ ಹೊತ್ತಿಕೊಂಡ ಬೆಂಕಿ ಇಡೀ ಬಸ್ ಗೆ ವ್ಯಾಪಿಸಿದ್ದು, 20 ಪ್ರಯಾಣಿಕರನ್ನು ಬಲಿ ಪಡೆದಿತ್ತು. ಆದರೆ ಈ ಬಸ್ ನಲ್ಲಿ ದುರಂತ ಹೆಚ್ಚಾಗಲು ಕಾರಣ ಬಸ್ ನಲ್ಲಿದ್ದ 234 ಸ್ಮಾರ್ಟ್ ಫೋನ್ ಗಳು ಸ್ಫೋಟಗೊಂಡಿದ್ದು ಎಂಬುದು ತನಿಖ ವೇಳೆ ಕಂಡು ಬಂದಿದೆ.
ಬಸ್ ನಲ್ಲಿದ್ದ 46 ಲಕ್ಷ ಮೌಲ್ಯದ ಸ್ಮಾರ್ಟ್ ಫೋನ್ ಗಳು ಬೆಂಕಿಯಿಂದ ಸ್ಫೋಟಗೊಂಡ ಪರಿಣಾಮ ದುರಂತ ಹೆಚ್ಚಗಲು ಕಾರಣ ಎಂದು ಫೋರೆನ್ಸಿಕ್ ತಜ್ಞರು ಬಸ್ ಪರಿಶೀಲನೆ ನಂತರ ಹೇಳಿಕೆ ನೀಡಿದ್ದಾರೆ.
ಮಂಗನಾಥ್ ಎಂಬ ಉದ್ಯಮಿ ಹೈದರಾಬಾದ್ ನಿಂದ ಬೆಂಗಳೂರಿಗೆ ಸ್ಮಾರ್ಟ್ ಫೋನ್ ಗಳನ್ನು ಪಾರ್ಸೆಲ್ ಮೂಲಕ ಸಾಗಿಸುತ್ತಿದ್ದ. ಬೆಂಗಳೂರಿನ ಇ-ಕಾಮರ್ಸ್ ಕಂಪನಿಗೆ ಈ ಸ್ಮಾರ್ಟ್ ಫೋನ್ ತಲುಪಬೇಕಿತ್ತು. ಈ ಕಂಪನಿ ಮೂಲಕ ಗ್ರಾಹಕರಿಗೆ ಸ್ಮಾರ್ಟ್ ಫೋನ್ ತಲುಪಿಸಲಾಗುತ್ತಿತ್ತು.
ಈ ಸ್ಮಾರ್ಟ್ ಫೋನ್ ಗಳ ಬ್ಯಾಟರಿಗಳು ಸ್ಫೋಟಗೊಂಡಿದ್ದವು. ಇದರಿಂದ ಬೆಂಕಿ ಮತ್ತಷ್ಟು ವೇಗವಾಗಿ ಬಸ್ ಆವರಿಸಲು ಕಾರಣ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ ನ ಟ್ಯಾಂಕರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದ್ದು, ಆದರೆ ಪಾರ್ಸೆಲ್ ಮೂಲಕ ತಂದಿದ್ದ ಸ್ಮಾರ್ಟ್ ಫೋನ್ ಗಳಿಗೆ ಬೆಂಕಿ ವ್ಯಾಪಿಸಿ ಅದರ ಬ್ಯಾಟರಿಗಳು ಸ್ಫೋಟಗೊಂಡು ಸಾವಿನ ಸಂಖ್ಯೆ ಹೆಚ್ಚಲು ಕಾರಣ ಎಂದು ಹೇಳಲಾಗಿದೆ.


