ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ 10 ದಿನಗಳ ಕಾಲ ನಡೆದ ಚಳಿಗಾಲದ ವಿಧಾನಸಭೆ ಅಧಿವೇಶನ ಶುಕ್ರವಾರ(ಡಿ.19) ಮುಕ್ತಾಯವಾಯಿತು. ದ್ವೇಷ ಭಾಷಣ ನಿಯಂತ್ರಣ ಮಸೂದೆ ಸೇರಿ 23 ವಿಧೇಯಕಗಳಿಗೆ ಅಂಗೀಕಾರ, ಉತ್ತರ ಕರ್ನಾಟಕದ ಸಮಸ್ಯೆಗಳು ಮತ್ತು ಅವುಗಳ ಮೇಲಿನ ಚರ್ಚೆಗಳು ನಡೆದರೆ, ಗೃಹಲಕ್ಷ್ಮಿ ಹಣ ಪಾವತಿ ಗದ್ದಲ, ಪವರ್ ಫೈಟ್ ಚರ್ಚೆಗೆ ಇನ್ನಷ್ಟು ಕಿಚ್ಚು ಹಚ್ಚಿಸುವ ವೇದಿಕೆಯಾಗುವುದರೊಂದಿಗೆ ಈ ಬಾರಿಯ ಚಳಿಗಾಲದ ಅಧಿವೇಶನ ಮುಕ್ತಾಯವಾಗಿದೆ.
ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಚರ್ಚೆಗೆ ಅಧಿವೇಶನದ ಎರಡನೇ ದಿನದಿಂದಲೇ ಅವಕಾಶ ನೀಡಲಾಯಿತು. ಆ ಮೂಲಕ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಮೇಲಿನ ಚರ್ಚೆಗೆ ಹೆಚ್ಚಿನ ಒತ್ತು ನೀಡಲಾಯಿತು. ಆದರೆ, ಅದು ಪ್ರತಿ ಬಾರಿಯಂತೆ ಬರೀ ಚರ್ಚೆಗಷ್ಟೇ ಸೀಮಿತವಾಯಿತೇ ಹೊರತು, ಉತ್ತರ ಕರ್ನಾಟಕಕ್ಕೆ ಸಮಸ್ಯೆಗಳಿಗೆ ಪರಿಹಾರ ನೀಡುವ ದೊಡ್ಡ ಘೋಷಣೆಗಳೇನು ಹೊರಬಿದ್ದಿಲ್ಲ.
ಚಳಿಗಾಲದ ಅಧಿವೇಶನದಲ್ಲಿ ಸುಮಾರು 57 ಗಂಟೆ 35 ನಿಮಿಷಗಳ ಕಾಲ ಕಲಾಪ ನಡೆಯಿತು. ಈ ಪೈಕಿ ಉತ್ತರ ಕರ್ನಾಟಕದ ಚರ್ಚೆಯಲ್ಲಿ 39 ಸದಸ್ಯರುಗಳು ಭಾಗವಹಿಸಿದ್ದರು. ಒಟ್ಟು 17.02 ಗಂಟೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಧಿವೇಶನದ ಮೊದಲ ದಿನ ಹಾಲಿ ಶಾಸಕ ಹೆಚ್.ವೈ. ಮೇಟಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಕಲಾಪವನ್ನು ಒಂದು ದಿನಕ್ಕೆ ಮುಂದೂಡಲಾಯಿತು. ಬಳಿಕ ಕಲಾಪದ ಆರನೇ ದಿನ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ ಸೂಚಿಸಿ ಕಲಾಪವನ್ನು ಒಂದು ದಿನಕ್ಕೆ ಮುಂದೂಡಿಕೆ ಮಾಡಲಾಯಿತು.
23 ಮಸೂದೆಗಳು ಅಂಗೀಕಾರ: ಅಧಿವೇಶನದಲ್ಲಿ ದ್ವೇಷ ಭಾಷಣ ತಡೆ ಮಸೂದೆ, ಸಾಮಾಜಿಕ ಬಹಿಷ್ಕಾರ ನಿಷೇಧ ಮಸೂದೆ, ಕರ್ನಾಟಕ ಅನುಸೂಚಿತ ಜಾತಿಗಳ ಉಪ ವರ್ಗೀಕರಣ ವಿಧೇಯಕ ಸೇರಿ 23 ಮಸೂದೆಗಳು ಮಂಡನೆಯಾಗಿ ಅಂಗೀಕಾರವಾದವು. ವಿಪಕ್ಷಗಳ ವಿರೋಧ, ಪ್ರತಿಭಟನೆ, ಗದ್ದಲದ ಮಧ್ಯೆ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಅಂಗೀಕಾರವಾಯಿತು. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ, ಔಷಧ ಮತ್ತು ಪ್ರಸಾಧನ ಸಾಮಗ್ರಿ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ಮಸೂದೆ ಹಾಗೂ ಧನವಿನಿಯೋಗ ಮಸೂದೆಗಳು ಅಂಗೀಕಾರಗೊಂಡವು.
ಜೊತೆಗೆ, 2025ನೇ ಸಾಲಿನ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ತಿದ್ದುಪಡಿ ವಿಧೇಯಕ, 2025ನೇ ಸಾಲಿನ ಬಾಂಬೆ ಸಾರ್ವಜನಿಕ ನ್ಯಾಸ(ಕರ್ನಾಟಕ ತಿದ್ದುಪಡಿ) ವಿಧೇಯಕ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಎರಡನೇ ತಿದ್ದುಪಡಿ ವಿಧೇಯಕ, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ (ತಿದ್ದುಪಡಿ) ವಿಧೇಯಕ, ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ, ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಭೂಕಂದಾಯ ಎರಡನೇ ತಿದ್ದುಪಡಿ ವಿಧೇಯಕಗಳು ಅಂಗೀಕೃತವಾಗಿವೆ.
ಉಳಿದಂತೆ, ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2025ನೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಲವು ಇತರ ಕಾನೂನುಗಳ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ಎರಡನೇ ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ ಸೇರಿ 23 ಮಸೂದೆಗಳನ್ನು ಅಂಗೀಕಾರ ಮಾಡಲಾಯಿತು.
ಸದ್ದು ಮಾಡಿದ ಗೃಹಲಕ್ಷ್ಮಿ ಹಣ ಪಾವತಿ ಗದ್ದಲ: ಈ ಬಾರಿ ವಿಧಾನಸಭೆ ಕಲಾಪದಲ್ಲಿ ಗೃಹಲಕ್ಷ್ಮಿ ಹಣ ಪಾವತಿಯಾಗದೇ ಇರುವ ಬಗ್ಗೆ ದೊಡ್ಡ ಗದ್ದಲ ಉಂಟಾಯಿತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದವು. ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ವಿಚಾರ ಭಾರಿ ಗದ್ದಲ, ಕೋಲಾಹಲ ಸೃಷ್ಟಿಸಿ ಅರ್ಧ ದಿನದ ಕಲಾಪವನ್ನೇ ನುಂಗಿ ಹಾಕಿತು.
ಕೊನೆಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ಬಂದು ವಿಷಾದ ಮತ್ತು ಕ್ಷಮೆ ಕೇಳುವಂತೆ ಬಿಜೆಪಿ ಮಾಡಿದ್ದಲ್ಲದೇ, ಎರಡು ತಿಂಗಳ ಗೃಹಲಕ್ಷ್ಮಿ ಬಾಕಿ ವ್ಯತ್ಯಯದ ಬಗ್ಗೆಯೂ ಸದನದಲ್ಲಿ ಸಚಿವೆ ಹೆಬ್ಬಾಳ್ಕರ್ ಒಪ್ಪಿಕೊಂಡರು. ಎರಡು ತಿಂಗಳ ಕಂತಿನ ವಿಚಾರದಲ್ಲಿ ವ್ಯತ್ಯಯ ಆಗಿದ್ದು ಹೌದು, ಇದನ್ನು ಪರಿಶೀಲಿಸಿ ಸರಿಪಡಿಸುತ್ತೇವೆ ಅಂತ ಸದನದಲ್ಲಿ ಹೇಳಿದರು. ಯಾರಿಗಾದರೂ ತಾವು ಮಾತನಾಡಿದ್ದು ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆಯಾಚಿಸಿದರು.
ಕಲಾಪದಲ್ಲಿ ಕಿಚ್ಚು ಹಚ್ಚಿದ ಕುರ್ಚಿ ಕದನ ಚರ್ಚೆ: ಈ ಬಾರಿ ವಿಧಾನಸಭೆ ಕಲಾಪದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯು ಮತ್ತೆ ಪವರ್ ಫೈಟ್ ಬೆಂಕಿಗೆ ತುಪ್ಪ ಸುರಿಯಿತು. ನಾಯಕತ್ವ ಬದಲಾವಣೆಯ ಚರ್ಚೆ, ಗೊಂದಲದ ಮಧ್ಯೆ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಈಗಲೂ ನಾನೇ ಸಿಎಂ ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಪಟ್ಟದ ಗಲಾಟೆಗೆ ಹೊಸ ಕಿಚ್ಚು ಹಚ್ಚಿದರು. ಅಷ್ಟೇ ಅಲ್ಲದೆ, ಅಧಿವೇಶನದ ಕೊನೆಯ ದಿನವೂ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ನನ್ನ ಪರವಾಗಿದೆ. ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಎರಡೂವರೆ ವರ್ಷ ಸಿಎಂ ಎಂದು ತೀರ್ಮಾನ ಆಗಿಲ್ಲ. ಇಂದು ನಾನೇ, ಮುಂದೆಯೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಮತ್ತಷ್ಟು ಗಟ್ಟಿ ಧ್ವನಿಯಲ್ಲಿ ಘೋಷಣೆ ಮಾಡಿದರು. ಆ ಮೂಲಕ ನಾಯಕತ್ವ ಬದಲಾವಣೆ ಗದ್ದಲ ತೀವ್ರ ಸ್ವರೂಪ ಪಡೆಯಲು ಬೆಳಗಾವಿ ಅಧಿವೇಶನ ಮುನ್ನುಡಿ ಹಾಡಿದಂತಾಗಿದೆ.
7 ನಿರ್ಣಯಗಳಿಗೆ ಸರ್ವಾನುಮತದ ಅಂಗೀಕಾರ: ವಿಧಾನಸಭೆ ಕಲಾಪದಲ್ಲಿ ಕೇಂದ್ರ ಸರ್ಕಾರದ ಸಹಕಾರ ಕೋರಿ 7 ಪ್ರಮುಖ ನಿರ್ಣಯಗಳಿಗೆ ಸರ್ವಾನುಮತದ ಅಂಗೀಕಾರ ಪಡೆಯಲಾಯಿತು. ಅದರಲ್ಲಿ ಪ್ರಮುಖವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಶೇ.50ರಿಂದ ಶೇ.56ರಷ್ಟು ಹೆಚ್ಚಿಸಿದ ಮೀಸಲಾತಿ ಪ್ರಮಾಣದ ಅಧಿಸೂಚನೆ ಮತ್ತು ಆದೇಶಗಳನ್ನು ಭಾರತ ಸಂವಿಧಾನ ಅನುಸೂಚಿ-9 ಸೇರಿಸುವಂತೆ ಕೇಂದ್ರಕ್ಕೆ ಕೋರುವ ನಿರ್ಣಯ ಅಂಗೀಕಾರವಾಯಿತು.


