ಕೋಲಾರದ ನರಸಪುರ ಹೋಬಳಿಯ ಗರುಡನಪಾಳ್ಯದಲ್ಲಿ 21 ಎಕರೆ ಸರ್ಕಾರಿ ಖರಾಬು ಭೂಮಿ ಕಬಳಿಕೆ ಮಾಡಿದ್ದಾರೆಂದು ಆರೋಪಿಸಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಬಿಜೆಪಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ದೂರು ನೀಡಿ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ವೆ ನಂಬರ್ 46, 47ರಲ್ಲಿ ಕೃಷ್ಣ ಭೈರೇಗೌಡರು 21 ಎಕರೆ ಭೂಮಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು ನಿಷ್ಪಕ್ಷಪಾತ ತನಿಖೆಗೆ ಬಿಜೆಪಿ ಆಗ್ರಹಿಸಿದೆ.
2025ರ ಡಿಸೆಂಬರ್ 17ರಂದು ಬಿಜೆಪಿ ಮುಖಂಡ ತಮ್ಮೇಶ ಗೌಡ ಅವರು ದಾಖಲೆಗಳನ್ನು ಬಿಡುಗಡೆ ಮಾಡಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮೂಲ ದಾಖಲೆಗಳನ್ನು ಫೋರ್ಜರಿ ಮಾಡಲಾಗಿದೆ. ಹೀಗಾಗಿ ಕೃಷ್ಣಭೈರೇಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದರು.
ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಕೃಷ್ಣಭೈರೇಗೌಡ, ಅದು ನಮ್ಮ ತಾತನವರ ಜಾಗ, ಅವರಿಗೆ ಮೂರು ಜನ ಮಕ್ಕಳು. ಎಲ್ಲರಿಗೆ ಭಾಗ ಆಗಿ ನಮಗೆ ಬಂದಿದೆ ಎಂದು ಸ್ಪಷ್ಟನೆ ನೀಡಿದ್ದರು. ಈ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಆಗಲಿ, ನಾನೇ ತನಿಖೆಗೆ ಸಹಕಾರ ಮಾಡುತ್ತೇನೆ ಎಂದಿದ್ದರು.
ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳ ತೆರವಿನ ಸಂಬಂಧ ವಿಪಕ್ಷ ಬಿಜೆಪಿ ಆರೋಪಗಳಿಗೆ ಸಚಿವ ಕೃಷ್ಣಭೈರೇಗೌಡ ಕಿಡಿ ಕಾರಿದ್ದಾರೆ. ಒತ್ತುವರಿ ನಾವೇ ಮಾಡಿಸಿದ್ದಾಗಿದ್ರೆ ಯಾಕೆ ತೆರವು ಮಾಡ್ತಿದ್ವಿ? ಆರೋಪ ಮಾಡೋರು ಕಾಮನ್ ಸೆನ್ಸ್ ಇಟ್ಕೊಂಡು ಮಾತಾಡಬೇಕು ಎಂದಿದ್ದಾರೆ.
ಅಲ್ಲಿ ಬಾಂಗ್ಲಾದೇಶದ ವಲಸಿಗರು ಇರುವುದಾಗಿ ಆರೋಪ ಮಾಡ್ತಿದ್ದಾರೆ. ಅದು ನಿಜವಾಗಿದ್ದರೆ ಅವರನ್ನು ಗುರುತಿಸುವುದು ಕೇಂದ್ರ ಸರ್ಕಾರದ ಕೆಲಸ. ಕೇಂದ್ರ ಗೃಹ ಇಲಾಖೆ ಏನು ಮಾಡುತ್ತಿದ್ದೆ, ಬಿಜೆಪಿಯವರು ನಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಕೇಂದ್ರ ಸರ್ಕಾರಕ್ಕೆ ಹೊಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.


