ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26 ನೇ ಕೇಂದ್ರ ಬಜೆಟ್‌ನಲ್ಲಿ ಉದ್ಯಮಗಳ ಉತ್ತೇಜನಕ್ಕೆ ಕ್ರಮಗಳನ್ನು ಪ್ರಕಟಿಸಿದ್ದಾರೆ. ಸಣ್ಣ ಉದ್ಯಮಗಳಿಗೆ 20 ಸಾವಿರ ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಸ್ಟಾರ್ಟಪ್‌ಗಳಿಗೆ 10ರಿಂದ 20 ಕೋಟಿವರೆಗೂ ಕಡಿಮೆ ಬಡ್ಡಿಗೆ ಸಾಲ ನೀಡಿಕೆ, ಮೈಕ್ರೊ ಕಂಪೆನಿಗಳಿಗೆ ಐದು ಲಕ್ಷದವರೆಗಿನ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಎಂದಿದ್ದಾರೆ. ಬೀದಿ ಬದಿ ವ್ಯಾಪರಿಗಳಿಗೆ ಯುಪಿಐ ಲಿಂಕ್ ಆಗಿರೋ ಕ್ರೆಡಿಟ್ ಕಾರ್ಡ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು, ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಲು ಸರಕಾರದ ನೆರವು ಕಲ್ಪಿಸುವುದಾಗಿ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಉದ್ಯಮ ನಡೆಸುವುದಕ್ಕಾಗಿ ಹೊಸ ಯೋಜನೆ ಜಾರಿ, ಚರ್ಮೋದ್ಯಮಕ್ಕೆ ಉತ್ತೇಜನ, ಮೇಡ್ ಇನ್ ಇಂಡಿಯಾ ಬ್ರಾಂಡ್‌ಗೆ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ. ಎಸ್‌ಸಿ/ಎಸ್‌ಟಿ ಸಮುದಾಯಗಳ 5 ಲಕ್ಷ ಮಹಿಳೆಯರಿಗೆ ಲಾಭವಾಗುವಂತೆ ಐದು ವರ್ಷಗಳ ಅವಧಿಯೊಂದಿಗೆ ಟರ್ಮ್ ಲೋನ್‌ಗಳನ್ನು ನೀಡಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದಿದ್ದಾರೆ.
ಗೊಂಬೆ ಉತ್ತಾದನೆಗೆ ಹೆಚ್ಚು ಒತ್ತು ನೀಡುವುದಾಗಿ ಘೋಷಿಸಿರುವ ನಿರ್ಮಲಾ ಸೀತರಾಮನ್, ಇದಕ್ಕಾಗೆ ರಾಷ್ಟ್ರೀಯ ಕ್ರೀಯಾ ಯೋಜನೆ ಮಾಡುವುದಾಗಿ ಹೇಳಿದ್ದಾರೆ. ಜಾಗತಿಕವಾಗಿ ಭಾರತದ ಗೊಂಬೆಗಳಿಗೆ ಹೆಚ್ಚಿನ ಮಾನ್ಯತೆ ಸಿಗುವಂತೆ ಮಾಡಲು ಯೋಜನೆ ರೂಪಿಸುವುದಾಗಿ ತಿಳಿಸಿದ್ದಾರೆ.
ಭಾರತದ ಪಾದರಕ್ಷೆ ಮತ್ತು ಚರ್ಮದ ವಲಯಕ್ಕೆ ಮೀಸಲಾದ ಯೋಜನೆಯನ್ನು ಘೋಷಿಸಿದ್ದು, ಇದು 22 ಲಕ್ಷ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ, 4 ಲಕ್ಷ ಕೋಟಿ ರೂ. ಆದಾಯವನ್ನು ಸಾಧಿಸುತ್ತದೆ ಮತ್ತು ರಫ್ತುಗಳನ್ನು 1.1 ಲಕ್ಷ ಕೋಟಿಗೆ ರೂ.ಗೆ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.