ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನ ಸೇನೆ ಗಡಿಯಲ್ಲಿ ನಡೆಸಿದ ಅಪ್ರೋಜಿತ ದಾಳಿಗೆ 15 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ ಎರಡು ಕ್ಷಿಪಣಿ ದಾಳಿ ನಡೆಸುವ ಪ್ರಯತ್ನವನ್ನು ಭಾರತ ವಿಫಲಗೊಳಿಸಿದೆ.
ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಮಂಗಳವಾರ ತಡರಾತ್ರಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಈ ದಾಳಿಯಲ್ಲಿ70ಕ್ಕೂ ಹೆಚ್ಚು ಉಗ್ರರು ಅಸುನೀಗಿದ್ದರು.
ಭಾರತದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಪಂಜಾಬ್ ಮೇಲೆ ಆಕಾಶದಿಂದ ಸಿಡಿಸುವ 2 ಕ್ಷಿಪಣಿಗಳನ್ನು ಉಡಾಯಿಸಿದೆ. ಆದರೆ ಈ ದಾಳಿಯನ್ನು ಭಾರತ ವಿಫಲಗೊಳಿಸಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಅಮೃತಸರದ ಸುತ್ತಮುತ್ತ ಕ್ಷಿಪಣಿ ಅವಶೇಷಗಳು ಪತ್ತೆಯಾಗಿವೆ.
ಯುದ್ಧ ವಿಮಾನಗಳ ಮೂಲಕ ಪಿಎಲ್ 15 ಇ ಚೀನಾ ನಿರ್ಮಿತ ಕ್ಷಿಪಣಗಳನ್ನು ಪಾಕಿಸ್ತಾನ ಪಂಜಾಬ್ ಮೇಲೆ ಉಡಾಯಿಸಿದೆ. ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಹೊಶಿರ್ಪುರದಲ್ಲಿ ದಾಳಿ ನಡೆಸುವ ಪ್ರಯತ್ನ ನಡೆದಿದೆ. ಭಾರತೀಯ ಸೇನೆ ಈ ಎರಡು ಕ್ಷಿಪಣಿಗಳನ್ನು ಹೊಡೆದುರುಳಿಸಿದೆ.
ಇದೇ ವೇಳೆ ಪಾಕಿಸ್ತಾನ ಅಂರಾಷ್ಟ್ರೀಯ ಗಡಿಯಲ್ಲಿ ಅಪ್ರೋಜಿತ ಗುಂಡು ಹಾಗೂ ಶೆಲ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ವರು ಮಕ್ಕಳು, ಒಬ್ಬ ಯೋಧ ಸೇರಿದಂತೆ 15 ಮಂದಿ ಅಸುನೀಗಿದ್ದಾರೆ.
ಕುಪ್ವಾರ, ರಜೌರಿ, ಪುಲ್ವಾಮಾ ಸೇರಿದಂತೆ ಭಾರತದ ಗಡಿಯಲ್ಲಿ ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದ್ದು, ಭಾರತ ಗಡಿ ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಿದೆ.