Saturday, November 15, 2025
Menu

ಮಂಗಳೂರಿನಲ್ಲಿ 2 ಅಪಘಾತ, 6 ಮಂದಿ ದುರ್ಮರಣ

car accident

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಮಂಗಳೂರಿನಲ್ಲಿ ಸಂಭವಿಸಿದ ಪ್ರತ್ಯೇಕ ಭೀಕರ ಅಪಘಾತಗಳಲ್ಲಿ 6 ಮಂದಿ ಮೃತಪಟ್ಟಿದ್ದಾರೆ.

ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಳಿ​ ಸರ್ಕಲ್​ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಅಲ್ಲದೆ, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು ಬೆಂಗಳೂರಿನ ಪೀಣ್ಯ ನಿವಾಸಿಗಳಾದ ರವಿ (64), ರಮ್ಯಾ (23) ಹಾಗೂ ನಂಜಮ್ಮ (75) ಎಂದು ಗುರುತಿಸಲಾಗಿದೆ.

ಕೀರ್ತಿ, ಸುಶೀಲಾ, ಬಿಂದು ಹಾಗೂ ಪ್ರಶಾಂತ್ ಅವರು ಗಂಭೀರವಾಗಿ ಗಾಯಗೊಂಡು, ಚಿಂತಾಜನಕ ಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಸುಬ್ರಹ್ಮಣ್ಯ ಹಾಗೂ ಕಿರಣ್ ಎಂಬವರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಉಡುಪಿ ಶ್ರೀಕೃಷ್ಣನ ದರ್ಶನಕ್ಕೆಂದು ಹೊರಟಿದ್ದರು. ಮುಂಜಾನೆ ಸುಮಾರು 4.40ರ ಸಮಯದಲ್ಲಿ ಬೆಂಗಳೂರಿನ ಕಡೆಯಿಂದ ಬರುತ್ತಿದ್ದ ಕಾರು ಬಿ.ಸಿ.ರೋಡ್ ಎನ್.ಜಿ. ಸರ್ಕಲ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಓರ್ವ ಸ್ಥಳದಲ್ಲಿಯೇ ಮೃತಪಟ್ಟ್ಟಿದ್ದು, ಉಳಿದಂತೆ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್.ಐ. ಸುತೇಶ್ ಹಾಗೂ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಪಣಂಬೂರಿನಲ್ಲಿ ಅಪಘಾತಕ್ಕೆ ಮೂವರು ಬಲಿ

ಪಣಂಬೂರು ಜಂಕ್ಷನ್​ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮುಹಮ್ಮದ್ ಕುಂಞಿ (25), ಅಬೂಬಕ್ಕರ್ (65) ಮತ್ತು ಇಬ್ರಾಹಿಂ (68) ಮೃತಪಟ್ಟವರು. ಇವರು ಮಂಗಳೂರಿನ ಕೊಣಾಜೆ ಬಳಿಯ ಮೊಂಟೆಪದವು ನಿವಾಸಿಗಳು.

ದನ ರಸ್ತೆ ದಾಟುತ್ತಿರುವುದನ್ನು ನೋಡಿ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್​​ ಚಾಲಕ ತಕ್ಷಣ ನಿಲ್ಲಿಸಿದ್ದಾನೆ. ಆಗ ಅದರ ಹಿಂದೆ ಬರುತ್ತಿದ್ದ ಆಟೋ ರಿಕ್ಷಾವನ್ನೂ ನಿಲ್ಲಿಸಿದ್ದು, ಇದರಿಂದ ಹಿಂಬದಿಯಲ್ಲಿದ್ದ ಇನ್ನೋವಾ ಕಾರನ್ನು ಕೂಡ ಚಾಲಕ ನಿಲ್ಲಿಸಿದ್ದಾನೆ.

ಇದೇ ಸಂದರ್ಭದಲ್ಲಿ ಹಿಂದುಗಡೆಯಿಂದ ಬರುತ್ತಿದ್ದ ಇನ್ನೊಂದು ಟ್ಯಾಂಕರ್ ವಾಹನ ರಭಸವಾಗಿ ಬಂದು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಎಡಭಾಗಕ್ಕೆ ಹೋಗಿದೆ. ಈ ಸಮಯದಲ್ಲಿ, ಆಟೋ ರಿಕ್ಷಾ ಎರಡೂ ಟ್ಯಾಂಕರ್​ ವಾಹನಗಳ ಮಧ್ಯೆ ಸಿಲುಕಿಕೊಂಡು ಅಪ್ಪಚ್ಚಿಯಾಗಿದೆ. ಪರಿಣಾಮ ಆಟೋ ರಿಕ್ಷಾ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *