ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮನವಿಯ ಮೇರೆಗೆ ಕೇಂದ್ರ ಸರ್ಕಾರವು ಮಾವು ಬೆಳೆಗಾರರಿಗೆ ಒಳ್ಳೆಯ ಸುದ್ದಿ ನೀಡಿದೆ.
ಕರ್ನಾಟಕದಲ್ಲಿ ಮಾವಿನ ಬೆಳೆಗಾರರಿಗೆ ಕೊರತೆ ಬೆಲೆ ಪಾವತಿ ಮಾಡುವುದು ಹಾಗೂ ಮಾರುಕಟ್ಟೆ ಮಧ್ಯಸ್ಥಿಕೆಗೆ ಕೇಂದ್ರದ ಅನುಮೋದನೆ ನೀಡಿದ್ದು, ಇದರಿಂದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಮಾವು ಬೆಳೆಗಾರರಿಗೆ ಅನುಕೂಲ ಆಗಲಿದೆ.
ಈ ಬಗ್ಗೆ ಮಾಜಿ ಪ್ರಧಾನಿಗಳು 22 ಜೂನ್ 2025 ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಮಾಜಿ ಪ್ರಧಾನಿಗಳ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಮಾವು ಬೆಳೆಗಾರರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಕರ್ನಾಟಕದ ಮಾವು ಬೆಳೆಗಾರರನ್ನು ಬೆಂಬಲಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು. ಕಡಿಮೆ ಇಳುವರಿ, ಹವಾಮಾನ ವೈಪರಿತ್ಯ ಮತ್ತು ಮಾವಿನಹಣ್ಣಿನ ಅಂತರಾಜ್ಯ ಸಾಗಣೆಯ ಮೇಲಿನ ನಿರ್ಬಂಧಗಳಿಂದ ಉಂಟಾದ ತೀವ್ರ ಬೆಲೆ ಕುಸಿತದ ಬಗ್ಗೆ ಮಾಜಿ ಪ್ರಧಾನಿಗಳು ಪತ್ರದಲ್ಲಿ ಉಲ್ಲೇಖಿಸಿದ್ದರು.
ಈ ಸಮಸ್ಯೆಗಳಿಂದ ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮಾವು ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಮುಂದಿನ ದಿನಗಳಲ್ಲಿಯೂ ಇಂತಹುದೇ ಸಮಸ್ಯೆ ಬರುವ ಸಾಧ್ಯತೆ ಇರುವುದರಿಂದ ತಾವು ಬೆಳೆಗಾರರ ನೆರವಿಗೆ ಬರಬೇಕು ಎಂದು ಮಾಜಿ ಪ್ರಧಾನಿಗಳು ಸಚಿವರನ್ನು ಕೋರಿದ್ದರು.
NAFED ಮತ್ತು NCCF ಮೂಲಕ ಮಾವಿನ ಖರೀದಿಗಾಗಿ ಬೆಲೆ ಕೊರತೆ ಪಾವತಿ (PDP) ಮತ್ತು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (MIS) ಯನ್ನು ಪ್ರಾರಂಭಿಸುವಂತೆಯೂ ದೇವೇಗೌಡರು ಕೇಂದ್ರವನ್ನು ವಿನಂತಿಸಿದ್ದರು. ಈ ಉಪಕ್ರಮ ಕೈಗೊಳ್ಳುವ ಮೂಲಕ ಬೆಳೆಗಾರರಿಗೆ ಲಾಭದಾಯಕ ಬೆಲೆಗಳು ಮತ್ತು ಆರ್ಥಿಕ ಸಂಕಷ್ಟದಿಂದ ಪರಿಹಾರವನ್ನು ನೀಡುತ್ತದೆ ಎಂದು ಮನವರಿಕೆ ಮಾಡಿದ್ದರು.
ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು; ಮಾಜಿ ಪ್ರಧಾನಿ ದೇವೇಗೌಡರಿಗೆ ಪತ್ರ ಬರೆದು, ಭಾರತ ಸರ್ಕಾರವು ಕರ್ನಾಟಕದಲ್ಲಿ 2025–26ನೆ ಮಾರುಕಟ್ಟೆ ಋತುವಿನಲ್ಲಿ ಬೆಲೆ ಕೊರತೆ ಪಾವತಿ (PDP) ಯೋಜನೆಯಡಿಯಲ್ಲಿ ಕ್ವಿಂಟಲ್‌ಗೆ ₹1,616 ಮಾರುಕಟ್ಟೆ ಹಸ್ತಕ್ಷೇಪ ಬೆಲೆಯಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಮಾವಿನಹಣ್ಣಿನ ಖರೀದಿಗೆ ಅನುಮೋದಿಸಿದೆ ಎಂದು ತಿಳಿಸಿದ್ದಾರೆ.
ಸಕಾಲಿಕ ಮಾರುಕಟ್ಟೆ ಮಧ್ಯಸ್ಥಿಕೆ ಮೂಲಕ ರೈತರನ್ನು ಬೆಂಬಲಿಸುವ ಕೇಂದ್ರದ ಬದ್ಧತೆಯನ್ನು ಸಚಿವರು ಪುನರುಚ್ಚರಿಸಿದ್ದು, ಬೆಳೆಗಾರರ ಉತ್ಪನ್ನಗಳಿಗೆ ನ್ಯಾಯಯುತ ಆದಾಯವನ್ನು ಖಚಿತಪಡಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಜಿ ಪ್ರಧಾನಿಗಳು ಸಂತಸ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.


