ಹುಲಿ, ಕೋತಿಗಳ ಮಾರಣಹೋಮದ ನಂತರ ಇದೀಗ ತುಮಕೂರಿನಲ್ಲಿ 19 ನವಿಲುಗಳು ನಿಗೂಢ ರೀತಿಯಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದ ಜಮೀನಿನಲ್ಲಿ 19 ನವಿಲುಗಳು ನಿಗೂಢ ರೀತಿಯಲ್ಲಿ ಮೃತಪಟ್ಟಿವೆ. ಮೃತಪಟ್ಟ ನವಿಲುಗಳ ಮಾದರಿಯನ್ನು ಎಫ್ಎಸ್ಎಲ್ಗೆ ರವಾನಿಸಲಾಗಿದ್ದು ವರದಿ ನಿರೀಕ್ಷಿಸಲಾಗಿದೆ.
ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನುಗಳಲ್ಲಿ 5 ಗಂಡು ಹಾಗೂ 14 ಹೆಣ್ಣು ಸೇರಿ ಒಟ್ಟು 19 ನವಿಲುಗಳು ಒಂದೇ ಕಡೆ ಮೃತಪಟ್ಟಿವೆ.
ಬೆಳಗ್ಗೆ ರೈತರು ಜಮೀನಿಗೆ ಬಂದಾಗ ನವಿಲುಗಳ ಮೃತದೇಹಗಳು ಪತ್ತೆ ಆಗಿವೆ. ಆಗಸ್ಟ್ 1ರ ರಾತ್ರಿ ನವಿಲುಗಳು ಮೃತಪಟ್ಟಿದ್ದು, ದುಷ್ಕರ್ಮಿಗಳು ವಿಷ ಹಾಕಿ ಕೊಂದಿರಬೇಕು ಎಂದು ಶಂಕಿಸಲಾಗಿದೆ.
ಕ್ರಿಮಿನಾಶಕ ಸಿಂಪಡಣೆ ಮಾಡಿರುವ ಬೆಳೆಗಳನ್ನು ಸೇವಿಸಿ ಮೃತಪಟ್ಟಿರಬಹುದು ಅಥವಾ ಯಾರಾದರೂ ಏನಾದರೂ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ತಾಲ್ಲೂಕು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿದ ಅಧಿಕಾರಿಗಳು 5 ಗಂಡು ಹಾಗೂ 14 ಹೆಣ್ಣು ನವಿಲುಗಳು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಅರಣ್ಯಾಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಸತ್ತ ನವಿಲುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ವಿಧಿವಿಜ್ಞಾನ ಕೇಂದ್ರದಿಂದ ವರದಿ ಬಂದ ನಂತರವಷ್ಟೇ 19 ನವಿಲುಗಳ ಸಾವಿಗೆ ಕಾರಣ ಏನೆಂಬುದು ಗೊತ್ತಾಗಲಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಎಸಿಎ್ ಮಲ್ಲಿಕಾರ್ಜುನ್, ವಲಯ ಅರಣ್ಯಾಧಿಕಾರಿ ಸುರೇಶ್, ಬೀಟ್ ಗಾರ್ಡ್ ಮಹೇಶ್ ಕುಮಾರ್, ಉಪ ಅರಣ್ಯ ವಲಯಾಧಿಕಾರಿ ಮುತ್ತುರಾಜು ಭೇಟಿ ನೀಡಿದ್ದರು.