Menu

ಮಧುಗಿರಿಯಲ್ಲಿ 19 ನವಿಲು ಸಾವು: ತನಿಖೆಗೆ ಸಚಿವ ಈಶ್ವರ ಖಂಡ್ರೆ ಆದೇಶ

ಮಧುಗಿರಿ ತಾಲೂಕು ಮಿಡಿಗೇಶಿಯ ಬಳಿ ರೈತರೊಬ್ಬರ ಜಮೀನಿನಲ್ಲಿ 19 ನವಿಲುಗಳು ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ- ಡಿಸಿಎಫ್ ನೇತೃತ್ವದ ತನಿಖೆಗೆ ಆದೇಶ ನೀಡಿದ್ದಾರೆ.

ಮುಖ್ಯ ವನ್ಯಜೀವಿ ಪರಿಪಾಲಕರಿಗೆ ನೀಡಿರುವ ಸೂಚನೆಯಲ್ಲಿ ಅವರು, ಒಂದೂವರೆ ತಿಂಗಳ ಹಿಂದೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಮ್ಮ ರಾಷ್ಟ್ರಪ್ರಾಣಿಯಾದ ಹುಲಿ ಮತ್ತು ಅದರ ನಾಲ್ಕು ಮರಿಗಳು ವಿಶಪ್ರಾಶನದಿಂದ ಮೃತಪಟ್ಟಿದ್ದವು, ನಂತರ ಕೋತಿಗಳನ್ನು ಕೊಂದು ಬಂಡೀಪುರದ ಬಳಿ ಎಸೆದಿದ್ದ ಘಟನೆ ನಡೆದಿತ್ತು. ಈಗ ನಮ್ಮ ರಾಷ್ಟ್ರಪಕ್ಷಿ ನವಿಲಿನ ಮಾರಣ ಹೋಮ ನಡೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

ನವಿಲುಗಳ ಸಾವಿಗೆ ಕೀಟನಾಶಕ ಸೇವನೆ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಕೀಟನಾಶಕವನ್ನು ನವಿಲುಗಳನ್ನು ಸಾಯಿಸಲೆಂದೇ ಹಾಕಲಾಗಿತ್ತೆ ಅಥವಾ ಬೆಳೆಗಳಿಗೆ ಸಿಂಪಡಿಸಿದ ಕೀಟನಾಶಕ ಯುಕ್ತ ಫಸಲು ತಿಂದು ನವಿಲುಗಳು ಮೃತಪಟ್ಟಿವೆಯೇ ಎಂಬ ಬಗ್ಗೆ ಡಿಸಿಎಫ್ ನೇತೃತ್ವದ ತಂಡದಿಂದ ತನಿಖೆ ನಡೆಸಿ 5 ದಿನಗಳ ಒಳಗಾಗಿ ವರದಿ ಸಲ್ಲಿಸಲು ಮತ್ತು ನಿಯಮಾನುಸಾರ ಕ್ರಮ ಜರುಗಿಸಲು ಸೂಚಿಸಿದ್ದಾರೆ.

ಪರಿಶಿಷ್ಟ 1 ಮತ್ತು 2ರ ಯಾವುದೇ ವನ್ಯಜೀವಿ ಮೃತಪಟ್ಟರೂ ಆಡಿಟ್ ಮಾಡಿಸಿ ತತ್ ಕ್ಷಣವೇ ಸಚಿವರ ಕಾರ್ಯಾಲಯಕ್ಕೆ ಮಾಹಿತಿ ನೀಡಲು ಕ್ರಮ ವಹಿಸಲೂ ನಿರ್ದೇಶನ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *