ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಕಾಲ್ತುಳಿತ ಸಂಭವಿಸಿ 18 ಪ್ರಯಾಣಿಕರು ಅಸು ನೀಗಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಜನರು ಮಹಾಕುಂಭಕ್ಕೆ ಹೋಗುತ್ತಿದ್ದರು ಎಂದು ಹೇಳಲಾಗಿದೆ. ಹೆಚ್ಚಿನ ಜನಸಂದಣಿ ಸೇರಿದ್ದ ಕಾರಣ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಉಂಟಾಯಿತು ಎಂದು ತಿಳಿದು ಬಂದಿದೆ.
ಅತಿ ಹೆಚ್ಚು ಟಿಕೆಟ್ ಮಾರಾಟ ಮಾಡಿರುವ ರೈಲ್ವೆ ಇಲಾಖೆಯು ಜನರನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಪ್ರತಿ ಗಂಟೆಗೆ 1,500 ಸಾಮಾನ್ಯ ಟಿಕೆಟ್‌ಗಳನ್ನು ರೈಲ್ವೆ ಮಾರಾಟ ಮಾಡುತ್ತಿದೆ, ಇದರಿಂದಾಗಿ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿ ನಿಯಂತ್ರಣ ತಪ್ಪಿ ಪ್ಲಾಟ್‌ಫಾರ್ಮ್ ಸಂಖ್ಯೆ 14 ಮತ್ತು ಪ್ಲಾಟ್‌ಫಾರ್ಮ್ ಸಂಖ್ಯೆ 16 ರ ಬಳಿಯ ಎಸ್ಕಲೇಟರ್ ಬಳಿ ಕಾಲ್ತುಳಿತ ಸಂಭವಿಸಿದೆ. ಇನ್ನೇನು ರೈಲು ಬರಬೇಕು ಅನ್ನುವಷ್ಟರಲ್ಲಿ ಪ್ಲಾಟ್ಫಾರಂ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಎಲ್ಲರೂ ಅವಸರವಾಗಿ ಹೋಗಲು ಮುಂದಾದಾಗ ನೂಕುನುಗ್ಗಲು ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹಲವರು ಟಿಕೆಟ್‌ಗಳನ್ನು ಕನ್ಫರ್ಮ್ ಮಾಡಿಕೊಂಡಿದ್ದರೂ ರೈಲು ಹತ್ತಲು ಸಾಧ್ಯವಾಗಲಿಲ್ಲ. ಟಿಕೆಟ್ ಇಲ್ಲದ ಅಥವಾ ಸಾಮಾನ್ಯ ಟಿಕೆಟ್ ಹೊಂದಿರುವ ಜನರು ರೈಲಿನ ಬಾಗಿಲುಗಳಲ್ಲಿ ಕಿಕ್ಕಿರಿದು ತುಂಬಿದ್ದರು. ಜನಸಂದಣಿಯಲ್ಲಿ ಪ್ರಯಾಣಿಕರ ವಸ್ತುಗಳು ಕಳ್ಳತನವಾಗಿದ್ದವು. ಜನರಲ್ ಮತ್ತು ಸ್ಲೀಪರ್ ಕೋಚ್‌ಗಳನ್ನುಮಾತ್ರವಲ್ಲ ಎಸಿ ಕೋಚ್‌ಗಳಲ್ಲಿಯೂ ಕಾಲಿಡಲು ಜಾಗವಿರಲಿಲ್ಲ.
ತಂತ್ರ ಸೇನಾನಿ ಎಕ್ಸ್‌ಪ್ರೆಸ್ ಮತ್ತು ಭುವನೇಶ್ವರ ಎಕ್ಸ್‌ಪ್ರೆಸ್ ರೈಲುಗಳು ತಡವಾಗಿ ಚಲಿಸುತ್ತಿದ್ದವು. ಅವುಗಳ ಪ್ರಯಾಣಿಕರು ಪ್ಲಾಟ್‌ಫಾರ್ಮ್ ಸಂಖ್ಯೆ 12-13 ರಲ್ಲಿ ಕಾಯುತ್ತಾ ನಿಂತಿದ್ದರು. ಪ್ಲಾಟ್‌ಫಾರ್ಮ್‌ನಿಂದ ಮೆಟ್ಟಿಲುಗಳವರೆಗೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರಾತ್ರಿ 9.30 ರ ಸುಮಾರಿಗೆ ಪ್ಲಾಟ್‌ಫಾರ್ಮ್ ಸಂಖ್ಯೆ 15 ತಲುಪಿತು. ಆಗ ತಳ್ಳಾಟ ಶುರುವಾಗಿ ಮೆಟ್ಟಿಲುಗಳ ಮೇಲೆ ನಿಂತಿದ್ದ ಅನೇಕರು ಕೆಳಗೆ ಬಿದ್ದರು ಎಂದು ತಿಳಿದು ಬಂದಿದೆ.
ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಗಾಯಾಳುಗಳ ಚಿಕಿತ್ಸೆಗೆ ತಲಾ 2.5 ಲಕ್ಷ ರೂ ಪರಿಹಾರ ನೀಡುವುದಾಗಿ ಹೇಳಿದೆ. ಈ ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ಸಂತಾಪಗಳು. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.