ಛತ್ತೀಸಗಢದ ದಾಂತೇವಾಡದಲ್ಲಿ ನಡೆದ ಎನ್ ಕೌಂಟರ್ ನಲ್ಲಿ 16 ನಕ್ಸಲರನ್ನು ಹತ್ಯೆ ಮಾಡಲಾಗಿದೆ.
ಸುಕ್ಮಾ-ದಂತೇವಾಡ ಗಡಿಯಲ್ಲಿರುವ ಉಪಂಪಲ್ಲಿ ಕೇರ್ಲಪಾಲ್ ಪ್ರದೇಶದ ಅರಣ್ಯದಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 16 ನಕ್ಸಲರು ಹತ್ಯೆಯಾಗಿದ್ದಾರೆ.
ಶುಕ್ರವಾರ (ಮಾ.28) ರಾತ್ರಿ ಈ ಪ್ರದೇಶದಲ್ಲಿ ಮಾವೋವಾದಿಗಳ ಇರುವ ಮಾಹಿತಿ ಆಧರಿಸಿ ಪೊಲೀಸರು ನಡೆಸಿದ ಕಾರ್ಯಾಚರಣೆವೇಳೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಜವಾನರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ ೨೯ರಂದು ಬೆಳಗ್ಗೆ ಕೇರ್ಲಪಾಲ್ ಪೊಲೀಸ್ ಠಾಣೆ ಬಳಿಯ ಕಾಡಿನಲ್ಲಿ ನಕ್ಸಲರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಇಲ್ಲಿಯವರೆಗೆ 16 ನಕ್ಸಲರ ಶವಗಳು ಪತ್ತೆಯಾಗಿವೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ಎಕೆ 47, ಎಸ್‌ಎಲ್‌ಆರ್, ಐಎನ್‌ಎಸ್‌ಎಎಸ್ ರೈಫಲ್, 303 ರೈಫಲ್, ರಾಕೆಟ್ ಲಾಂಚರ್, ಬಿಜಿಎಲ್ ಲಾಂಚರ್ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾ.25 ರಂದು ಛತ್ತೀಸ್‌ಗಢದ ಬಿಜಾಪುರ ಮತ್ತು ಕಂಕೇರ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ನಕ್ಸಲ್ ನಿಗ್ರಹ ಪಡೆಯ ಕಾರ್ಯಾಚರಣೆಯಲ್ಲಿ 22 ನಕ್ಸಲರು ಹತರಾಗಿದ್ದರು. ಗುಂಡಿನ ಚಕಮಕಿಯಲ್ಲಿ ಓರ್ವ ಭದ್ರತಾ ಪಡೆಯ ಸಿಬ್ಬಂದಿ ಸಾವನ್ನಪ್ಪಿದ್ದರು.