Menu

15ನೇ ಹಣಕಾಸು ಆಯೋಗದ ಸಾವಿರಾರು ಕೋಟಿ ಹಗರಣ: ಪಿ.ರಾಜೀವ್ ಆರೋಪ

P RAJIV

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲೇ ಬಹಳ ದೊಡ್ಡ ಭ್ರಷ್ಟಾಚಾರ ನಡೆದಿದೆ. 15ನೇ ಹಣಕಾಸು ಆಯೋಗದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮಾತೆತ್ತಿದರೆ ಸಂವಿಧಾನದ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆಯವರಿಗೆ, ತಮ್ಮ ಇಲಾಖೆಯಲ್ಲಿ ಸಂವಿಧಾನದ ಉಲ್ಲಂಘನೆ ಎಷ್ಟಾಗುತ್ತಿದೆ ಎಂದು ತಿಳಿದುಕೊಳ್ಳುವ ಪುರುಸೊತ್ತಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದ್ದಾರೆ.

ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಣಕಾಸು ಆಯೋಗವು ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡುವ ಅನುದಾನದಡಿ ಟೈಡ್ ಹಾಗೂ ಅನ್ ಟೈಡ್ ಎಂದರೆ ಬಂಧಿತ ಮತ್ತು ನಿರ್ಬಂಧಿತ ಎಂಬ ಎರಡು ವಿಧಗಳಿವೆ. ಬಂಧಿತ ಅನುದಾನವು ಕೇಂದ್ರದಿಂದ ಕರ್ನಾಟಕದ 6 ಸಾವಿರ ಗ್ರಾಮ ಪಂಚಾಯಿತಿಗಳಿಗೆ ನಿಗದಿಯಾಗಿ ಬರುತ್ತದೆ. ಇಲ್ಲಿ ಆಯುಕ್ತರ ಕಾರ್ಯಾಲಯದಲ್ಲಿ ಸಣ್ಣಪುಟ್ಟ ಬದಲಾವಣೆಗೆ ಸ್ವಲ್ಪ ದಿನ ಅವಕಾಶ ಕೊಡುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಪೈಸೆ ಅನುದಾನವನ್ನೂ ಆಚೀಚೆ ಬದಲಿಸುವಂತಿಲ್ಲ ಎಂದು ಪಿ.ರಾಜೀವ್ ವಿವರಿಸಿದರು.

ಆದರೆ, ಪ್ರಿಯಾಂಕ್ ಖರ್ಗೆಯವರ ಇಲಾಖೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಹೈಮಾಸ್ಕ್ ಹಾಕಿಕೊಳ್ಳಲು ಕಮಿಷನ್ ಆಧಾರದಲ್ಲಿ ಹಂಚಿಕೆ ಮಾಡಿಕೊಂಡು ಸಾವಿರಾರು ಕೋಟಿ ಹಗರಣ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕೊಂದರಲ್ಲೇ ಬೇರೆ ಗ್ರಾಮ ಪಂಚಾಯಿತಿಗೆ ಹೋಗಬೇಕಾದ ಕೇಂದ್ರದ ಅನುದಾನವನ್ನು 24 ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಬೇಕಾಬಿಟ್ಟಿಯಾಗಿ ಕಾಂಗ್ರೆಸ್ ಶಾಸಕರಿರುವ ಗ್ರಾಪಂಗಳಿಗೆ ಕೊಟ್ಟಿದ್ದಾರೆ. ಇದು ಸಂವಿಧಾನ ವಿರೋಧಿ. ಕೇವಲ ನಿಯಮಗಳ ಉಲ್ಲಂಘನೆ ಅಲ್ಲ ಎಂದು ಆಕ್ಷೇಪಿಸಿದರು.

ಒಕ್ಕೂಟ ವ್ಯವಸ್ಥೆಯಡಿ ಕೇಂದ್ರ ಕೊಡುವ ಅನುದಾನವನ್ನು ಸಂವಿಧಾನದ ಪ್ರಕಾರ ಬಳಸಬೇಕಿತ್ತು. ಇಲ್ಲಿ ಸಂವಿಧಾನದ ಉಲ್ಲಂಘನೆ ಆಗಿದೆ ಎಂದು ಟೀಕಿಸಿದರು. ಇದರ ಕುರಿತು ಕೇಂದ್ರ ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇವೆ. 15ನೇ ಹಣಕಾಸು ಆಯೋಗದ ಹಣವನ್ನು ದುರ್ಬಳಕೆ ಮಾಡಿಕೊಂಡ ಕಾರಣ ಇದು ಕೇಂದ್ರ ಸರಕಾರದ ಗಮನಕ್ಕೆ ಬಂದಲ್ಲಿ ಇವರು ಮುಂದೆ ರೂಪಾಯಿ ಅನುದಾನ ಪಡೆಯಲಾಗುವುದಿಲ್ಲ. ಇವರು ಮಾಡಿದ ತಪ್ಪಿಗೆ ರಾಜ್ಯ ಸರಕಾರಕ್ಕೆ ಅನುದಾನಗಳೇ ಬರುವುದಿಲ್ಲ ಎಂದು ಗಮನ ಸೆಳೆದರು.

ಉತ್ತರ ಕೊಡದ ಕಮಿಷನರ್- ಆಕ್ಷೇಪ
ನಮ್ಮ ಗ್ರಾಪಂ ಅಧ್ಯಕ್ಷರ, ಸದಸ್ಯರ ಒಕ್ಕೂಟದಿಂದ ಅರ್ಜಿ ಕೊಟ್ಟರೂ ಇಲ್ಲಿನವರೆಗೆ ಕಮೀಷನರ್ ಉತ್ತರ ನೀಡಿಲ್ಲ; ಲಿಖಿತವಾಗಿ ಕೊಟ್ಟಲ್ಲಿ ಸಿಲುಕಿ ಹಾಕಿಕೊಳ್ಳುತ್ತಾರೆ ಎಂಬುದೇ ಇದಕ್ಕೆ ಕಾರಣ ಎಂದು ವಿವರಿಸಿದರು. 15ನೇ ಹಣಕಾಸು ಆಯೋಗದ ಸಾವಿರಾರು ಕೋಟಿ ಈ ರೀತಿ ದುರ್ಬಳಕೆ ಆದಾಗ, ಪ್ರಿಯಾಂಕ್ ಖರ್ಗೆಯವರೇ, ಇಲಾಖೆ ಸಚಿವರಾಗಿ ಯಾವ ನೈತಿಕತೆ ಇಟ್ಟುಕೊಂಡು ನೀವಿಲ್ಲಿ ಇರುತ್ತೀರಿ? ಎಂದು ಕೇಳಿದರು.

ಇಡೀ ಕರ್ನಾಟಕದಲ್ಲಿ ಸಾವಿರಾರು ಪಂಚಾಯಿತಿಗಳ ಸರಾಸರಿ 8 ರಿಂದ 10 ಲಕ್ಷ ರೂ. ಈ ರೀತಿ ದುರ್ಬಳಕೆ ಆಗಿದೆ. ಸಾವಿರಾರು ಕೋಟಿಯ ಹಗರಣ ಇದಾಗಿದೆ. ಇದರ ಬಗ್ಗೆ ಕೂಡಲೇ ಮಾಹಿತಿ ಕೊಡಬೇಕು ಎಂದು ಆಗ್ರಹಿಸಿದರು. ತಪ್ಪಿತಸ್ಥ ಅಧಿಕಾರಿಯನ್ನು 6 ತಿಂಗಳಿಗೆ, 3 ತಿಂಗಳಿಗೆ ಅಮಾನತಿನಲ್ಲಿಟ್ಟು ಮರು ನೇಮಕ ಮಾಡಿದರೆ ನೀವು ಮಾಡಿದ ಭ್ರಷ್ಟಾಚಾರ ಮುಚ್ಚಿಹೋಗದು ಎಂದು ತಿಳಿಸಿದರು.

ರಾಯಭಾಗ ತಾಲ್ಲೂಕಿನಲ್ಲಿ 10-12 ಕೋಟಿಯ ಹಗರಣ

ರಾಯಭಾಗ ತಾಲ್ಲೂಕಿನಲ್ಲಿ ಲೋಕಾಯುಕ್ತರಿಗೆ ಒಬ್ಬರು ದೂರು ನೀಡಿದ್ದಾರೆ. ಒಂದು ಗ್ರಾಮ ಪಂಚಾಯಿತಿಯ ಒಟ್ಟು 52 ಕಾಮಗಾರಿಗಳ ಹೆಸರಿನಲ್ಲಿ 10ರಿಂದ 12 ಕೋಟಿಯ ಹಗರಣ ನಡೆದಿದೆ. ಆ ವ್ಯಕ್ತಿ ಕಾಮಗಾರಿ ನಡೆಯದೇ ಇರುವ ಕುರಿತು ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಗ್ರಾಮೀಣಾಭಿವೃದ್ಧಿ ಇಲಾಖೆ ಕರ್ನಾಟಕದಲ್ಲಿ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ವಿವರಿಸಿದರು.

ಸುಮಾರು 5.36 ಲಕ್ಷ ಮೊತ್ತದ ತ್ಯಾಜ್ಯ ಸಂಸ್ಕರಣೆ ವಿಷಯದಲ್ಲಿ ಬಿಲ್ ಮಾಡಿ ಹಣ ಪಡೆದಿದ್ದಾರೆ. ಕಾಮಗಾರಿಯೇ ಆಗಿಲ್ಲವೆಂದು ದೂರು ಕೊಟ್ಟಿದ್ದಾರೆ. ಇದಕ್ಕೆ ಉತ್ತರವಾಗಿ ಶೆಡ್ ನಿರ್ಮಿಸಿಲ್ಲ; ಕಚೇರಿಗೆ ಲೆಡ್ಜರ್ ಖರೀದಿಸಿದ್ದಾಗಿ ತಿಳಿಸಿದ್ದಾಗಿ ವಿವರಿಸಿದರು. ಇಂಥ ಹಲವು ದುರ್ಬಳಕೆ ಆಗಿದ್ದು, ಇದರ ಕುರಿತು ತಕ್ಷಣಕ್ಕೆ ತನಿಖೆ ನಡೆಸಿ ರಾಜ್ಯದ ಜನರಿಗೆ ವರದಿ ನೀಡಬೇಕು ಎಂದು ಆಗ್ರಹಿಸಿದರು.

ಜಿ ರಾಮ್ ಜಿ ಬಂದ ಮೇಲೆ ಈ ಥರ ಹಗರಣ ಮಾಡಲು ಸಾಧ್ಯವಾಗದೆಂಬ ಕಾರಣಕ್ಕೆ ಕಾಂಗ್ರೆಸ್ ಇದೀಗ ರಸ್ತೆ ಮೇಲೆ ಬಂದು ನಿಂತಿದೆ. ನಿಮ್ಮ ಹಗರಣಗಳೆಲ್ಲವೂ ಜನರ ಮುಂದೆ ಹೊರಕ್ಕೆ ಬರಬೇಕಿದೆ. ನರೇಗಾದಲ್ಲಿ ಇಲ್ಲಿನವರೆಗೆ ಕರ್ನಾಟಕಕ್ಕೆ 5.5 ಲಕ್ಷ ಕೋಟಿ ಮೊತ್ತ ಬಂದಿದೆ. ನಾವು ಇಂಥದ್ದನ್ನು ಮಾಡಿದ್ದೇವೆ ಎಂದು ತೋರಿಸಲು ಒಂದು ಉದಾಹರಣೆ ನಿಮ್ಮ ಬಳಿ ಇದೆಯೇ ಎಂದು ಪ್ರಶ್ನಿಸಿದರು.

Related Posts

Leave a Reply

Your email address will not be published. Required fields are marked *