ಮಯಾಂಗ್ ಅಗರ್ವಾಲ್ ಶತಕ ಹಾಗೂ ಪ್ರಸಿದ್ಧ ಕೃಷ್ಣ ಮಾರಕ ದಾಳಿ ನೆರವಿನಿಂದ ಕರ್ನಾಟಕ ತಂಡ 150 ರನ್ ಗಳಿಂದ ರಾಜಸ್ಥಾನ್ ತಂಡವನ್ನು ಸೋಲಿಸಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಜೇಯ ದಾಖಲೆ ಮುಂದುವರಿಸಿದೆ.
ಅಹಮದಾಬಾದ್ ನಲ್ಲಿ ಮಂಗಳವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 324 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಕಠಿಣ ಗುರಿ ಗುರಿ ಬೆಂಬತ್ತಿದ ರಾಜಸ್ಥಾನ್ ತಂಡ 38 ಓವರ್ ಗಳಲ್ಲಿ 174 ರನ್ ಗೆ ಆಲೌಟಾಯಿತು.
ಪ್ರಸಿದ್ಧ ಕೃಷ್ಣ ಮಾರಕ ದಾಳಿ ನಡೆಸಿ 5 ವಿಕೆಟ್ ಪಡೆದು ಮಿಂಚಿದರು. ಕೃಷ್ಣಗೆ ಉತ್ತಮ ಬೆಂಬಲ ನೀಡಿದ ಶ್ರೀಶ ಆಯುಷ್ ಮತ್ತು ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಗಳಿಸಿದರು.
ರಾಜಸ್ಥಾನ್ ಪರ ಮಧ್ಯಮ ಕ್ರಮಾಂಕದಲ್ಲಿ ಕರಣ್ ಲಾಂಬಾ (55) ಅರ್ಧಶತಕ ಬಾರಿಸಿದರೆ, ದೀಪಕ್ ಹೂಡಾ (29), ಕುಕ್ನಾ ಅಜಯ್ ಸಿಂಗ್ (25) ತಕ್ಕಮಟ್ಟಿಗೆ ಹೋರಾಟ ನಡೆಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕರ್ನಾಟಕ ತಂಡ ಭರ್ಜರಿ ಫಾರ್ಮ್ ನಲ್ಲಿರುವ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಮೊದಲ ವಿಕೆಟ್ ಗೆ 184 ರನ್ ಪೇರಿಸಿ ಭರ್ಜರಿ ಆರಂಭ ನೀಡಿದರು.
ಮಯಾಂಕ್ 107 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡು ಬರೋಬ್ಬರಿ 100 ರನ್ ಬಾರಿಸಿ ಔಟಾದರೆ, ದೇವದತ್ ಪಡಿಕ್ಕಲ್ 82 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 91 ರನ್ ಬಾರಿಸಿದ್ದಾಗ ಔಟಾಗಿ 9 ರನ್ ಗಳಿಂದ ಶತಕ ವಂಚಿದರು.
ಪಡಿಕ್ಕಲ್ ವಿಜಯ್ ಹಜಾರೆ ಟೂರ್ನಿಯಲ್ಲಿ 5 ಪಂದ್ಯಗಳಿಂದ 600ಕ್ಕೂ ಹೆಚ್ಚು ರನ್ ಕಲೆ ಹಾಕಿ ದೇಶೀಯ ಕ್ರಿಕೆಟ್ ನ ಎಲ್ಲಾ ಮಾದರಿಗಳಲ್ಲೂ 600ಕ್ಕೂ ಅಧಿಕ ರನ್ ಪೂರೈಸಿದ ಮೊದಲ ಆಟಗಾರ ಎಂಬ ವಿಶಿಷ್ಟ ದಾಖಲೆಗೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ 7 ವಿಕೆಟ್ ಗೆ 324 (ಮಯಂಕ್ 100, ದೇವದತ್ ಪಡಿಕ್ಕಲ್ 91, ಅಭಿನವ್ ಮನೋಹರ್ 35, ಕೆಎಲ್ ರಾಹುಲ್ 25, ಮಾನವ್ 51/2, ಕುಕ್ನಾ 66/2).
ರಾಜಸ್ಥಾನ್ 38 ಓವರ್ ಗಳಲ್ಲಿ 174 (ಕರಣ್ ಲಾಂಬಾ 55, ದೀಪಕ್ ಹೂಡಾ 29, ಕುಕ್ನಾ ಅಜಯ್ ಸಿಂಗ್ 25, ಪ್ರಸಿದ್ಧ ಕೃಷ್ಣ 36/5, ಶ್ರೀಶ 35/2, ಶ್ರೇಯಸ್ 45/2.


