ಭಟ್ಕಳದಲ್ಲಿ ದೀರ್ಘಾವಧಿ ವೀಸಾ ಹೊಂದಿರುವ 14 ಪಾಕಿಸ್ತಾನಿಗಳು ವಾಸವಿದ್ದು, ದೀರ್ಘಾವಧಿ ವೀಸಾ ಹೊಂದಿದ್ದು ಭಾರತದಲ್ಲೇ ಇರಲಿದ್ದಾರೆ. ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ನಡೆದ ಬೆನ್ನಲ್ಲೇ, ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿದೆ.
ಭಟ್ಕಳದಲ್ಲಿ ನೆಲಸಿರುವ 14 ಪಾಕಿಸ್ತಾನ ಮೂಲದ ಮಹಿಳೆಯರು ದೀರ್ಘಾವಧಿ ವೀಸಾ ಇರುವ ಕಾರಣ ಭಟ್ಕಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಭಟ್ಕಳ ಹಾಗೂ ಪಾಕಿಸ್ತಾನದ ನಡುವೆ ಸ್ವಾತಂತ್ರ್ಯ ಪೂರ್ವದಲ್ಲೇ ವೈವಾಹಿಕ ಸಂಬಂಧಗಳು ನಡೆಯುತ್ತಿದುದು ಸಾಮಾನ್ಯವಾಗಿತ್ತು. ಹಲವು ವರ್ಷದಿಂದ 10 ಪಾಕಿಸ್ತಾನ ಮೂಲದ ಮಹಿಳೆಯರಿದ್ದು ಇವರಲ್ಲಿ ನಾಲ್ಕು ಜನ ಭಾರತದಲ್ಲೇ ಜನಿಸಿದವರು. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಿಸಲಾಗುತ್ತಿದೆ.
ಈ ಮಹಿಳೆಯರು ಭಾರತದ ಪೌರತ್ವಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಇವರಿಗೆ ಹಾಗೂ ಭಾರತದಲ್ಲಿ ಹುಟ್ಟಿದ ಇವರ ಮಕ್ಕಳಿಗೆ ಪೌರತ್ವ ನೀಡಿಲ್ಲ. ದೀರ್ಘಾವಧಿ ವೀಸಾ ಹಾಗೂ ಭಾರತೀಯ ಪುರುಷರನ್ನು ವಿವಾಹವಾಗಿದ್ದರಿಂದ ಈ 14 ಮಹಿಳೆಯರು ಭಟ್ಕಳದಲ್ಲೇ ಇರಲಿದ್ದಾರೆ.
ಕೆಲವು ವರ್ಷದ ಹಿಂದೆ ಬಾಂಗ್ಲಾದ ಮಹಿಳೆ ಗಡಿ ಉಲ್ಲಂಘಿಸಿ ಭಟ್ಕಳಕ್ಕೆ ಬಂದು ಇಲ್ಲಿನ ಯುವಕನನ್ನು ವಿವಾಹವಾಗಿದ್ದು ಆಕೆ ಜೈಲಿನಲ್ಲಿದ್ದು ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ಭಟ್ಕಳದಲ್ಲಿ 14 ಪಾಕಿಸ್ತಾನಿ ಮಹಿಳೆಯರಲ್ಲದೇ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇರುವ ಸಾಧ್ಯತೆ ಇದೆ. ಈ ಕುರಿತು ಮಾಹಿತಿ ಕಲೆಹಾಕಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಭಟ್ಕಳಕ್ಕೆ ತೆರಳಿದ್ದಾರೆ.