Menu

ದುಬೈನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದ 123 ಕನ್ನಡಿಗರು

ಅಮೆರಿಕಾ-ಇಸ್ರೇಲ್ ದಾಳಿ, ಇರಾನ್‌ ಪ್ರತಿದಾಳಿಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ವಿಮಾನಗಳ ರಾಟಾಟ ರದ್ದುಗೊಂಡು ದುಬೈ ಅಬುದಾಬಿಗಳಲ್ಲಿ ಸಿಲುಕಿದ್ದ 213 ಕನ್ನಡಿಗರು ಸೋಮವಾರ ರಾತ್ರಿ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸಾಗಿದ್ದಾರೆ.

ಇರಾನ್‌ ಇಸ್ರೇಲ್‌ ಸಂಘರ್ಷದಿಂದ ನಡೆದ ಬೆಳವಣಿಗೆಗಳಿಂದ ಮೂರು ದಿನಗಳ ಆತಂಕದಲ್ಲಿಯೇ ಇವರೆಲ್ಲ ಕಾಲ ಕಳೆದಿದ್ದರು. ತಾಯ್ನಾಡಿಗೆ ಮರಳಿದವರಲ್ಲಿ ಕರ್ನಾಟಕದ ವಿಧಾನ ಪರಿಷತ್ ಸದಸ್ಯ (ಎಂಎಲ್​ಸಿ) ಭೋಜೇಗೌಡ ಹಾಗೂ ಒಲಿಂಪಿಕ್ ಪದಕ ವಿಜೇತೆ, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸೇರಿದ್ದಾರೆ.

ಮಾಧ್ಯಮಗಳೊಂದಿಗೆ ತಾವಿದ್ದ ಆತಂಕದ ಕ್ಷಣಗಳನ್ನು ಹಂಚಿಕೊಂಡ ಎಂಎಲ್​ಸಿ ಭೋಜೇಗೌಡ, ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿ ದುಬೈ ಮಾರ್ಗವಾಗಿ ಬೆಂಗಳೂರಿಗೆ ವಾಪಸಾಗುವಾಗ ಎದುರಿಸಿದ ಸಂಕಷ್ಟಗಳನ್ನು ವಿವರಿಸಿದ್ದಾರೆ. ನಾನು ದುಬೈ ವಿಮಾನ ನಿಲ್ದಾಣ ತಲುಪಿದಾಗಲೇ ಗಂಭೀರ ಪರಿಸ್ಥಿತಿ ಅರಿವಿಗೆ ಬಂತು. ಮೊದಲು ವಿಮಾನ ಹೊರಡುವುದು ವಿಳಂಬವಾಗಿದೆ ಎಂದು ತಿಳಿಸಿದರು, ಸ್ವಲ್ಪ ಸಮಯದ ನಂತರ ವಿಮಾನವೇ ರದ್ದಾಗಿದೆ ಎಂದು ಮಾಹಿತಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನಸಂದಣಿ ಇತ್ತು, ಎಲ್ಲರ ಮುಖದಲ್ಲೂ ಯುದ್ಧದ ಭಯ ಎದ್ದು ಕಾಣುತ್ತಿತ್ತು ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೃಷ್ಣ ಭೈರೇಗೌಡ ಹಾಗೂ ಎಚ್.ಕೆ. ಪಾಟೀಲ್ ಕರೆ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು. ಸಚಿವ ಕೃಷ್ಣ ಭೈರೇಗೌಡ ಜೊತೆ ಮಾತನಾಡುತ್ತಿದ್ದಾಗಲೇ ಬಾಂಬ್ ಸ್ಫೋಟದ ಶಬ್ದ ಕೇಳಿಸಿತು. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಪಕ್ಕದಲ್ಲೇ ಬಾಂಬ್ ಬಿದ್ದಿದೆ ಎಂಬ ಮಾಹಿತಿ ಹಬ್ಬಿ ಆತಂಕ ಹೆಚ್ಚಿತ್ತು. ದುಬೈ ಸರ್ಕಾರ ನಮ್ಮ ನೆರವಿಗೆ ಬಂದು ವ್ಯವಸ್ಥೆ ಕಲ್ಪಿಸಿತ್ತು. ಇಷ್ಟು ಬೇಗ ಸ್ವದೇಶಕ್ಕೆ ವಾಪಸಾಗು ತ್ತೇವೆ ಎಂದು ಊಹಿಸಿರಲಿಲ್ಲ ಎಂದು ಭೋಜೇಗೌಡ ತಿಳಿಸಿದ್ದಾರೆ.

ಪ್ರದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ನಿರ್ಬಂಧಗಳೊಂದಿಗೆ ವಿಮಾನ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *