Saturday, February 22, 2025
Menu

12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಸಚಿವ ಎಂ ಬಿ ಪಾಟೀಲ

ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಬೆಳವಣಿಗೆ ಸಾಧಿಸಲು ಈಗ ಇರುವ 200ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳ ಜತೆಗೆ 30 ಸಾವಿರ ಎಕರೆ ವಿಸ್ತೀರ್ಣದಲ್ಲಿ 12 ವಿಶೇಷ ಹೂಡಿಕೆ ವಲಯಗಳನ್ನು ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಇದಕ್ಕಾಗಿ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ್ದು, ಇಲ್ಲೆಲ್ಲ ವಿಶ್ವ ದರ್ಜೆಯ ಮೂಲಸೌಕರ್ಯ ಒದಗಿಸಲಾಗುವುದು. ಕೆಐಎಡಿಬಿ ರಾಜ್ಯದಲ್ಲಿ ಈಗಾಗಲೇ 85 ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣದ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದ್ದು, ಇಲ್ಲಿ 25 ಸಾವಿರ ಕೈಗಾರಿಕೆಗಳು ನೆಲೆಯೂರಿವೆ ಎಂದರು.

ಉತ್ಪಾದನಾ ವೆಚ್ಚ ಕಡಿಮೆಯಾಗಿ, ದಕ್ಷತೆ ಹೆಚ್ಚಾಗಬೇಕು ಎನ್ನುವುದು ಸರಕಾರದ ನೀತಿಯಾಗಿದೆ. ಇದನ್ನು ಸಾಧಿಸಲು `ಕ್ಲಸ್ಟರ್ ಆಧಾರಿತ ನೀತಿ’ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಬೇರೆಬೇರೆ ಭಾಗಗಳಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಇ.ವಿ.ತಯಾರಿಕೆ ಕ್ಲಸ್ಟರ್, ಫಾರ್ಮಾ, ಡೀಪ್-ಟೆಕ್ ಮತ್ತು ಡ್ರೋನ್ ಪಾರ್ಕ್ ಗಳನ್ನು ಸ್ಥಾಪಿಸಲಾಗುತ್ತಿದೆ. ಕೈಗಾರಿಕಾ ಪ್ರದೇಶಗಳಿಗೆ ಹತ್ತಿರದ ನದೀಮೂಲಗಳಿಂದ ಶುದ್ಧ ಕುಡಿಯುವ ನೀರು ಪೂರೈಸಲು 3,800 ಕೋಟಿ ರೂ. ಮೊತ್ತದ ಬೃಹತ್ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಚೀನಾದಿಂದ ತೀವ್ರ ಸವಾಲು ಎದುರಾಗಿದ್ದು, ತಯಾರಿಕೆ ವಲಯದ ಚಿತ್ರಣವೇ ಬದಲಾಗಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಜಾಗತಿಕ ಅಸ್ಥಿರತೆಯ ಸಮಸ್ಯೆಯೂ ಇದೆ. ಸರಕಾರವು ಪ್ರಗತಿಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದು, ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ತಯಾರಿಕೆ ಮತ್ತು ನಾವೀನ್ಯತೆಯ ತೊಟ್ಟಿಲನ್ನಾಗಿ ಪ್ರತಿಷ್ಠಾಪಿಸಲಿದೆ ಎಂದರು.

ತಂತ್ರಜ್ಞಾನದ ಬಳಕೆ, ಹೂಡಿಕೆ ಆಕರ್ಷಣೆ ಮತ್ತು ಸ್ಪರ್ಧಾತ್ಮಕ ಉದ್ಯಮಗಳ ಸ್ಥಾಪನೆಯೇ ಭವಿಷ್ಯದ ಆರ್ಥಿಕ ಬೆಳವಣಿಗೆಯ ನಿರ್ಣಾಯಕ ಶಕ್ತಿಗಳಾಗಿವೆ. ಇದಕ್ಕಾಗಿ ಕೈಗಾರಿಕಾ ರಂಗದಲ್ಲಿ ಡಿಜಿಟಲ್ ಪರಿವರ್ತನೆಯನ್ನು ಅಳವಡಿಸಿ ಕೊಳ್ಳಲಾಗುತ್ತಿದೆ. ಜತೆಗೆ ಇಂಗಾಲವನ್ನು ಕಡಿಮೆ ಹೊರಸೂಸುವ ಹಾಗೂ ಪರಿಸರಸ್ನೇಹಿ ಉಪಕ್ರಮಗಳಿಗೂ ಗಮನ ಹರಿಸಲಾಗಿದೆ. 55 ಲಕ್ಷ ಜನರಿಗೆ ಉದ್ಯೋಗ ನೀಡಿರುವ 8 ಲಕ್ಷ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ವಿಶೇಷ ಒತ್ತು ಕೊಡಲಾಗಿದೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *