Wednesday, August 13, 2025
Menu

ಆರ್‌ಸಿಬಿ ಗೆಲುವಿನಲ್ಲಿ ಸಿಎಂ ಡಿಸಿಎಂ ಪ್ರಚಾರದ ಹಪಾಹಪಿಗೆ 11ಜನ ಬಲಿ : ಆರ್‌. ಅಶೋಕ್‌ ಕಿಡಿ

ಆರ್‌ಸಿಬಿ ಗೆಲುವಿನ ನಂತರ ಅಭಿಮಾನಿಗಳಲ್ಲಿ ಮನೆ ಮಾಡಿದ್ದ ಸಂಭ್ರಮವನ್ನು encash ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳಬೇಕು ಎನ್ನುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಅವರ ಹಪಾಹಪಿಯೇ 11 ಜನ ಅಮಾಯಕ ಯುವಕರ ಸಾವಿಗೆ ಕಾರಣ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಕಿಡಿ ಕಾರಿದ್ದಾರೆ.

ಆರ್ ಸಿಬಿ ತಂಡ ಐಪಿಎಲ್ ಟೂರ್ನಮೆಂಟ್ ಗೆಲ್ಲುವ ಮುನ್ನವೇ, ಅಂದರೆ ಜೂನ್ 3ನೇ ತಾರೀಖು ಇನ್ನೂ ಪಂದ್ಯ ನಡೆಯುತ್ತಿರುವಾಗಲೇ ಬೆಂಗಳೂರು ಪೊಲೀಸ್ ಕಮಿಷನರ್ ಗೆ ಸರ್ಕಾರ ವಿಜಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಪತ್ರ ಬರೆದಿದೆ. ಚಿನ್ನಸಾಮಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮಕ್ಕೂ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎಂದು 11 ಅಮಾಯಕ ಯುವಕರ ಸಾವಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅಶೋಕ್‌ ಪೋಸ್ಟ್‌ ಮಾಡಿದ್ದಾರೆ.

ಪೊಲೀಸ್ ಕಮಿಷನರ್, ಡಿಸಿಪಿ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಗೆ ಪತ್ರ ಬರೆದಿದ್ದು ಯಾರು? DPAR ಇಲಾಖೆ ಯಾರ ಕೆಳಗೆ ಬರುತ್ತದೆ?ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ, 11 ಅಮಾಯಕ ಯುವಕರ ಸಾವು, ಇಡೀ ರಾಜ್ಯವನ್ನ ಶೋಕದ ಮಡುವಿನಲ್ಲಿ ಮುಳುಗಿಸಿತ್ತು ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರದ ಸೆಲ್ಫಿ ಫೋಟೋ ತೆವಲು ಇವತ್ತು ಆ ನತದೃಷ್ಟ ಹೆತ್ತವರು ತಮ್ಮ ಮಕ್ಕಳ ಫೋಟೋಗಳನ್ನು ಗೋಡೆಗೆ ಹಾಕಿ ಜೀವನ ಪರ್ಯಂತ ಆ ಕೊರಗಿನಲ್ಲೇ ಕಾಲ ಕಳೆಯಬೇಕಾದ ದಯನೀಯ ಸ್ಥಿತಿಗೆ ಕಾರಣವಾಗಿದೆ. ಆ ಹೆತ್ತವರಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕು, ಇನ್ನೆಂದೂ ಇಂತಹ ದುರ್ಘಟನೆಗಳು ರಾಜ್ಯದಲ್ಲಿ ಮರುಕಳಿಸಬಾರದು ಎನ್ನುವ ಉದ್ದೇಶದಿಂದ ವಿಧಾನಸಭೆಯ ಅಧಿವೇಶನದಲ್ಲಿ ನಿನ್ನೆ ಸುದೀರ್ಘವಾಗಿ ಮಾತನಾಡಿದ್ದೇನೆ. ಇನ್ನಾದರೂ ಸರ್ಕಾರ ಪ್ರಾಮಾಣಿಕವಾಗಿ ನಡೆದುಕೊಂಡು ಈ ಪ್ರಕರಣದಲ್ಲಿ ನ್ಯಾಯ ಒದಗಿಸಲಿ ಎನ್ನುವುದೇ ಕರ್ನಾಟಕದ ಜನತೆಯ ಆಗ್ರಹ ಎಂದು ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *