ಹಾಸನದಲ್ಲಿ 2.46 ಲಕ್ಷ ಜನ ಬುಧವಾರ ಹಾಸನಾಂಬ ದರ್ಶನ ಪಡೆದಿದ್ದಾರೆ. ಶುಕ್ರವಾರದಿಂದ ಇಲ್ಲಿಯವರೆಗೆ ಒಟ್ಟು 11.30 ಲಕ್ಷ ಜನರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ಬೆಳಿಗ್ಗೆಯಿಂದಲೇ ಭಾರಿ ಜನಸಂದಣಿ ಉಂಟಾಗಿದೆ. ಜನರ ಸಾಲು ಧರ್ಮ ದರ್ಶನ ಮತ್ತು ₹300 ಎರಡೂ ಮಾರ್ಗಗಳು ಬ್ಯಾರಿಕೇಡ್ ಪ್ರದೇಶವನ್ನು ದಾಟಿ ಬೀದಿಗಳಿಗೆ ವಿಸ್ತರಿಸಿವೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಟ ಮಾಹಿತಿ ನೀಡಿದ್ದಾರೆ.
ಇಂದು ದರ್ಶನಕ್ಕೆ ಸುಮಾರು +/- 4 ಗಂಟೆಗಳಿಗೂ ಅಧಿಕ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮುಂದಿವ ದಿನಗಳಲ್ಲೂ ಇದೇ ರೀತಿಯ ಪ್ರವೃತ್ತಿ ಮುಂದುವರಿಯಲಿದೆ. ದಿನೆ ದಿನೇ ಜನಸಂದಣಿ ಹೆಚ್ಚಾಗುತ್ತಲೇ ಇರುತ್ತದೆ. ದರ್ಶನದ ಸಮಯವೂ ಹೆಚ್ಚಾಗಲಿದೆ. ಸಾಮಾನ್ಯವಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎರಡು ಪಟ್ಟು ಜನಸಂದಣಿ ಹೆಚ್ಚಾಗಿದೆ. ಕಳೆದ ವರ್ಷ ದರ್ಶನಕ್ಕೆ 10-15 ಗಂಟೆಗಳು ಬೇಕಾಯಿತು. ಈ ಬಾರಿ ನಾವು ಆ ಸಮಯವನ್ನು 4-5 ಗಂಟೆಗಳಿಗೆ ಇಳಿಸಿದ್ದೇವೆ. ಆದರೂ ದುಪ್ಪಟ್ಟು ಜನಸಂದಣಿ ಇದೆ. ಹೀಗಾಗಿ ಭಕ್ತಾದಿಗಳು ಹೆಚ್ಚಿನ ಸಮಯಕ್ಕೆ ಸಿದ್ಧರಾಗಲು ಸಚಿವರು ವಿನಂತಿಸಿದ್ದಾರೆ.
ನೀವು ದೇವಸ್ಥಾನವನ್ನು ಪ್ರವೇಶಿಸಿ ವೇದಿಕೆಗೆ ಹೋಗುವಾಗ ದೇವಿಯ ದರ್ಶನವಾಗುತ್ತದೆ. ನೀವು ದರ್ಶನ ತೆಗೆದುಕೊಳ್ಳುವಾಗ ದಯವಿಟ್ಟು ಮುಂದೆ ಚಲಿಸುತ್ತಲೇ ಇರಿ. ದೇವಾಲಯದ ಎಡ ಮತ್ತು ಬಲ ಎರಡೂ ಭಾಗಗಳಲ್ಲಿ ನಿರ್ಗಮನಗಳಿವೆ. ಅಡ್ಡಲಾಗಿ ದಾಟಬೇಡಿ ಅಥವಾ ನಿಮ್ಮ ಮತ್ತು ಇತರರ ಸಮಯವನ್ನು ವ್ಯರ್ಥ ಮಾಡಬೇಡಿ. ನೀವು ವೇಗ ಕಡಿಮೆ ಮಾಡಿದರೆ ಅಥವಾ ನಿಲ್ಲಿಸಿದರೆ ನಮ್ಮ ಸಿಬ್ಬಂದಿ ನಿಮ್ಮನ್ನು ತಳ್ಳುತ್ತಾರೆ. ನೀವು ಚಲಿಸುತ್ತಲೇ ಇದ್ದರೆ ಅವರು ನಿಮ್ಮನ್ನು ತಳ್ಳುವುದಿಲ್ಲ. ಒಂದು ದಿನದಲ್ಲಿ 3 ಲಕ್ಷ ಜನರಿಗೆ ದರ್ಶನ ನೀಡುವುದು ಸವಾಲಿನ ಕೆಲಸ. ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ನಿಮ್ಮ ಸಹಕಾರವನ್ನು ಕೋರುತ್ತೇವೆ ಎಂದು ಕೃಷ್ನಬೈರೇಗೌಡ ಹೇಳಿದ್ದಾರೆ.