ಮುಂಬೈ: ಐಪಿಎಲ್ ಹರಾಜು ಪಟ್ಟಿಯಿಂದ 1005 ಆಟಗಾರರನ್ನು ಹೊರಗಿಟ್ಟ ಬಿಸಿಸಿಐ ಹೊಸದಾಗಿ 35 ಆಟಗಾರರನ್ನು ಸೇರ್ಪಡೆಗೊಳಿಸಿ ಅಚ್ಚರಿ ಮೂಡಿಸಿದೆ.
ಐಪಿಎಲ್ ಹರಾಜಿನ ಅಂತಿಮ ಪಟ್ಟಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ಬಿಸಿಸಿಐ ಇದೀಗ ಫ್ರಾಂಚೈಸಿಗಳ ಬೇಡಿಕೆ ಮೇರೆಗೆ ಪಟ್ಟಿಯಲ್ಲಿ ಇಲ್ಲದ 35 ಆಟಗಾರರನ್ನು ಸೇರ್ಪಡೆಗೊಳಿಸಿದೆ. ಇದರೊಂದಿಗೆ ಐಪಿಎಲ್ ಪರಿಷ್ಕೃತ ಆಟಗಾರರ ಪಟ್ಟಿ 350ಕ್ಕೆ ಸೀಮಿತಗೊಂಡಿದೆ.
ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ವಾಪಸ್ ಪಡೆದಿದ್ದ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಕ್ವಿಂಟನ್ ಡಿಕಾಕ್ ಹೊಸದಾಗಿ ಐಪಿಎಲ್ ಹರಾಜು ಪಟ್ಟಿಯಲ್ಲಿ ಸೇರ್ಪಡೆಗೊಂಡ ಪ್ರಮುಖ ಆಟಗಾರರಾಗಿದ್ದಾರೆ.
ಇತ್ತೀಚೆಗೆ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಸಿಡಿಸಿದ ನಂತರ ತನ್ನ ನಿಲುವು ಬದಲಿಸಿದ ಕ್ವಿಂಟನ್ ಡಿಕಾಕ್ ಹರಾಜು ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಇಂಗಿತ ವ್ಯಕ್ತಪಡಿಸಿದರು. ಕಳೆದ ಬಾರಿ ಹರಾಜಿನಲ್ಲಿ ನಿಗದಿಯಾಗಿದ್ದ 2 ಕೋಟಿ ಮೂಲಧನದಲ್ಲೂ ಕಡಿತ ಮಾಡಿರುವ ಅವರು, 1 ಕೋಟಿಗೆ ಇಳಿಕೆ ಮಾಡಿದ್ದಾರೆ. ಕಳೆದ ಬಾರಿ ಮೂಲಧನ 2 ಕೋಟಿ ರೂ.ಗೆ ಕೆಕೆಆರ್ ತಂಡ ಖರೀದಿಸಿತ್ತು.
ಹೊಸದಾಗಿ ಐಪಿಎಲ್ ಹರಾಜು ಪಟ್ಟಿಗೆ ಮೊದಲ ಬಾರಿ ಸೇರ್ಪಡೆಗೊಂಡ ಆಟಗಾರರ ಪೈಕಿ ಶ್ರೀಲಂಕಾದ ಟ್ರಾವೀನ್ ಮ್ಯಾಥ್ಯೂ, ಬಿನುರಾ ಫೆರ್ನಾಂಡೊ, ಕುಶಾಲ್ ಪೆರೆರಾ, ದುನೀತ್ ವೆಲ್ಲಾಂಗೆ, ಆಫ್ಘಾನಿಸ್ತಾನದ ಅರಬ್ ಗುಲ್ ಮತ್ತು ವೆಸ್ಟ್ ಇಂಡೀಸ್ ತಂಡದ ಅಕೀಮ್ ಔಟಾಸ್ಟೆ ಪ್ರಮುಖರು.
ದೇಶೀಯ ಆಟಗಾರರ ಪೈಕಿ ವಿಷ್ಣು ಸೋಲಂಕಿ, ಪರಿಕ್ಷೀತ್ ವಲಸಂಗಕ್ಕಾರ್, ಸಡೆಕ್ ಹುಸೇನ್, ಇಜಾಜ್ ಸಾವರಿಯಾ ಸೇರಿ 20 ಆಟಗಾರರು ಸೇರ್ಪಡೆಯಾಗಿದ್ದಾರೆ.
ಈ ಬಾರಿಯ 350 ಆಟಗಾರರ ಹರಾಜು ಪಟ್ಟಿಯಲ್ಲಿ 240 ಸ್ವದೇಶೀಯ ಹಾಗೂ 110 ವಿದೇಶೀ ಆಟಗಾರರು ಇದ್ದಾರೆ. ಒಟ್ಟಾರೆ 1390 ಆಟಗಾರರ ಪಟ್ಟಿ ಸಿದ್ಧಗೊಂಡಿದ್ದು, 1005 ಆಟಗಾರರನ್ನು ಪಟ್ಟಿಯಿಂದ ಹೊರಗೆ ಇಟ್ಟ ನಂತರ 350 ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಐಪಿಎಲ್ ನ 10 ಫ್ರಾಂಚೈಸಿಗಳು ಒಟ್ಟಾರೆ 77 ಸ್ಥಾನಗಳಿಗೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು, ಕೆಕೆಆರ್, ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಅತೀ ಹೆಚ್ಚು ಹಣ ಉಳಿಸಿಕೊಂಡಿದೆ. ಆರ್ ಸಿಬಿ ಮೊದಲ ಬಾರಿ ಪ್ರಶಸ್ತಿ ತಂದುಕೊಟ್ಟ ಬಹುತೇಕ ಆಟಗಾರರನ್ನು ಉಳಿಸಿಕೊಂಡಿದೆ.


