ಮೈಸೂರು: ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣರವರ ಹೆಸರಿನಲ್ಲಿ ಸ್ಥಾಪಿಸಿರುವ ದಿವ್ಯ ಚೇತನ ಎಸ್.ಎಂ.ಕೃಷ್ಣ ದತ್ತಿನಿಧಿ ಡಿಡಿಯನ್ನು ಶಾಸಕರುಗಳಾದ ಕೆ.ಎಂ.ಉದಯ್ ಹಾಗೂ ದಿನೇಶ್ ಗೂಳಿಗೌಡ ರಾಮಕೃಷ್ಣ ಆಶ್ರಮದಲ್ಲಿ ಹಸ್ತಾಂತರಿಸಿದರು.
ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲು ಹತ್ತು ಲಕ್ಷ ರೂ.ಗಳ ದತ್ತಿ ನಿಧಿ ಡಿಡಿಯನ್ನು ಶಾಸಕರಾದ ಕೆ.ಎಂ.ಉದಯ್ ಅವರು ಮೈಸೂರು ವಿಶ್ವವಿದ್ಯಾಲಯಕ್ಕೆ ಹಾಗೂ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಚಿನ್ನದ ಪದಕ ನೀಡಲು 5 ಲಕ್ಷ ರೂ.ಗಳ ದತ್ತಿ ನಿಧಿ ಡಿಡಿಯನ್ನು ಶಾಸಕರಾದ ದಿನೇಶ್ ಗೂಳಿಗೌಡ ಅವರು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಿದರು.
ಮೈಸೂರು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಮಹಾರಾಜರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಲೋಕನಾಥ್ ಅವರು ದಿವ್ಯ ಚೇತನ ಎಸ್.ಎಂ.ಕೃಷ್ಣ ದತ್ತಿನಿಧಿ ಡಿಡಿಯನ್ನು ಸ್ವೀಕರಿಸಿದರು.
ಡಿಡಿ ವಿತರಣೆ ಮಾಡಿದ ಬಳಿಕ ಮಾತನಾಡಿದ ಶಾಸಕ ಕೆ.ಎಂ.ಉದಯ್ ಅವರು, ಎಸ್.ಎಂ.ಕೃಷ್ಣ ಅವರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ ಈ ನಾಡಿಗೆ ಸಾಕಷ್ಟು ಕೊಡುಗೆಗಳು ಕೊಟ್ಟಿದ್ದಾರೆ. ಅವರ ಜೀವನ ಶೈಲಿ, ಕಾರ್ಯವೈಖರಿ ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು. ಈ ನಿಟ್ಟಿನಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಉಳಿಯಬೇಕು ಎಂಬ ಕಾರಣದಿಂದ ದತ್ತಿ ನಿಧಿ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಶಾಸಕ ದಿನೇಶ್ ಗೂಳಿಗೌಡ ಅವರು ಮಾತನಾಡಿ, ತುಂಬು ಜೀವನ ನಡೆಸಿದ ಎಸ್.ಎಂ.ಕೃಷ್ಣ ಅವರು ಬದುಕಿನುದ್ದಕ್ಕೂ ಶಿಸ್ತು ಮೈಗೂಡಿಸಿಕೊಂಡಿದ್ದರು. ರಾಮಕೃಷ್ಣ ಆಶ್ರಮದ ಶಿಸ್ತು ಅವರನ್ನು ಮೇರು ವ್ಯಕ್ತಿಯನ್ನಾಗಿ ರೂಪಿಸುವಂತೆ ಮಾಡಿತು. ಅವರ ಸಾಧನೆ, ಕಾರ್ಯಕ್ಷಮತೆ ವಿದ್ಯಾರ್ಥಿಗಳಿಗೆ ಅನುಕರಣೀಯ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರು ಸ್ಪೂರ್ತಿದಾಯಕವಾಗಲಿ ಅವರ ಹೆಸರು ಚಿರಸ್ಮರಣೀಯವಾಗಿ ಉಳಿಯಲಿ ಎಂದು ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಮಕೃಷ್ಣ ಆಶ್ರಮದ ಯುಕ್ತಿದಾನಂದ ಸ್ವಾಮೀಜಿ, ಮಾಜಿ ವಿಧಾನಪರಿಷತ್ ಸದಸ್ಯರಾದ ಮಾದೇಗೌಡರು, ಎಚ್.ಎ.ವೆಂಕಟೇಶ್, ವಿಕ್ರಾಂತ್ ದೇವೇಗೌಡರು, ಓಂಕಾರ್, ಸತ್ಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಿ ಹಲವು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿ ನಾಡಿನ ಅಭಿವೃದ್ಧಿಗೆ ಶ್ರಮಿಸಿದ್ದ ಎಸ್.ಎಂ.ಕೃಷ್ಣ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಎಂಟು ದತ್ತಿ ನಿಧಿ ಸ್ಥಾಪಿಸಲಾಗಿದೆ.
ದತ್ತಿ ನಿಧಿಯಿಂದ ಬರುವ ಹಣದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ರೈತರು, ಗಣ್ಯರಿಗೆ ಪ್ರತಿವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಮೂಲಕ ಉನ್ನತ ಸಾಧನೆಯ ಕನಸು ಹೊತ್ತವರಿಗೆ ಎಸ್.ಎಂ.ಕೃಷ್ಣ ಅವರು ಮಾದರಿಯಾಗಲಿ ಹಾಗೂ ಮತ್ತಷ್ಟು ಸಾಧಕರು ಹೊರಹೊಮ್ನಿ ನಾಡು ನುಡಿಗೆ ಶ್ರಮಿಸುವಂತಾಗಲಿ ಎಂಬ ಉದ್ದೇಶದಿಂದ ಈ ದತ್ತಿ ಪ್ರಶಸ್ತಿ ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ
ಎಸ್.ಎಂ.ಕೃಷ್ಣ ದತ್ತಿ ನಿಧಿ ಡಿಡಿ ಸ್ವೀಕರಿಸಿದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮುಕ್ತಿದಾನಂದ ಸ್ವಾಮೀಜಿ ಅವರು, ಎಸ್. ಎಂ.ಕೃಷ್ಣ ಅವರು ಮಹಾನ್ ವ್ಯಕ್ತಿ. ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ. ಆಶ್ರಮದೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದರು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆ ಸಿಕ್ಕಂತಾಗಲಿದೆ. ಇದೊಂದು
ಸಂತಸದ ಮತ್ತು ಮಾದರಿ ಕಾರ್ಯ ಎಂದರು.ಶಾಸಕರ ಕಾರ್ಯ ಶ್ಲಾಘನೀಯ
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಲೋಕನಾಥ್ ಮಾತನಾಡಿ, ಎಸ್.ಎಂ.ಕೃಷ್ಣ ಮಹಾನ್ ವ್ಯಕ್ತಿ. ಅವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿರುವ ಶಾಸಕರಾದ ಉದಯ್ ಮತ್ತು ದಿನೇಶ್ ಗೂಳಿಗೌಡ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅವರ ಹೆಸರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ವಿದ್ಯಾರ್ಥಿಗಳಿಗೆ ಕೂಡ ಪ್ರೇರಣೆ ಸಿಕ್ಕಂತಾಗಲಿದೆ ಎಂದರು.