ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ನದಿಗೆ 1ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಬಿಡಲಾಗುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ತಾಲೂಕಿನ ಕಂಪ್ಲಿ ಸೇತುವೆ ಮುಳುಗಡೆಯಾಗುವ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ, ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಸಾರ್ವಜನಿಕ ಹಾಗೂ ರಸ್ತೆ ಸಂಚಾರದ ಹಿತದೃಷ್ಟಿಯಿಂದ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಶ್ವನಾಥ್ ಅವರು ಈಗಾಗಲೇ ಗಂಗಾವತಿ ಗ್ರಾಮೀಣ ಪೊಲೀಸರಿಗೆ ಲಿಖಿತ ಸೂಚನೆ ನೀಡಿದ್ದಾರೆ. ಸೇತುವೆಯ ಸಂಚಾರ ಬಂದ್ ಆದರೆ ಕೊಪ್ಪಳ – ಬಳ್ಳಾರಿ ಜಿಲ್ಲೆಯ ಮಧ್ಯೆ ಇರುವ ಅಂತರ್ಜಿಲ್ಲಾ ನೇರ ಸಂಪರ್ಕ ಸ್ಥಗಿತವಾಗಲಿದೆ.
ಈಗಾಗಲೇ, ಹೆಚ್ಚಿನ ನೀರು ಹರಿಸಿದ್ದರಿಂದ ಸೇತುವೆಯ ಕೆಲವೇ ಅಡಿಗಳ ಕೆಳಭಾಗದಲ್ಲಿ ತುಂಗಭದ್ರಾ ನದಿಯ ನೀರು ಹರಿಯುತ್ತಿದೆ. ಇನ್ನೊಂದು 10-15 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಸೇತುವೆ ಸಂಪೂರ್ಣ ಮುಳುಗಡೆಯಾಗಲಿದೆ. ನದಿಯಲ್ಲಿ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದ ಸೇತುವೆ ಮೇಲಿನ ವಾಹನ ಮತ್ತು ಜನ ಸಂಚಾರ ಸೂಕ್ತವಲ್ಲ. ಸಂಚಾರ ನಿಷೇಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ ಮತ್ತು ಪೊಲೀಸ್ ಇಲಾಖೆಗೆ ಪ್ರತಿಗಳನ್ನು ರವಾನಿಸಲಾಗಿದೆ.
ಸುತ್ತು ಬಳಸಿ ಗಂಗಾವತಿಗೆ:
ಸೇತುವೆಯ ಸಂಚಾರ ಸ್ಥಗಿತವಾದರೆ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಮಧ್ಯೆ ಇದ್ದ ಅಂತರ್ಜಿಲ್ಲಾ ನೇರ ಸಂಪರ್ಕ ಕಡಿತಗೊಳ್ಳಲಿದೆ. ಹೀಗಾಗಿ, ಗಂಗಾವತಿ – ಕಂಪ್ಲಿ ಮಧ್ಯದ ಸಂಚಾರ ಅಥವಾ ಬಳ್ಳಾರಿ – ಕೊಪ್ಪಳ ಜಿಲ್ಲೆಯ ಸಂಚಾರಕ್ಕೆ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ಎದುರಾಗಲಿದೆ. ಭಾನುವಾರ ಸಂಜೆವರೆಗೂ ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು ನದಿಯ ಮೂಲಕ ಹೊರಕ್ಕೆ ಬಿಡಲಾಗಿತ್ತು. ಇದರ ಪ್ರಮಾಣವನ್ನು ಸೋಮವಾರ ಬೆಳಗಿನಿಂದ 1.15 ಲಕ್ಷ ಕ್ಯೂಸೆಕ್ಗೆ ಹೆಚ್ಚಿಸುವ ಸಾಧ್ಯತೆಯ ಬಗ್ಗೆ ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.
ನಿಲ್ಲದ ಜನರ ಪರದಾಟ:
ಕಂಪ್ಲಿ ಮತ್ತು ಗಂಗಾವತಿ ಆಡಳಿತಾತ್ಮಕವಾಗಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗೆ ಸೇರಿವೆಯಾದರೂ, ಭೌಗೋಳಿಕವಾಗಿ ಎರಡು ತಾಲೂಕಿನ ಗಡಿಗಳು ಕೇವಲ ಒಂದು ಕಿಲೋ ಮೀಟರ್ ಅಂತರದಲ್ಲಿವೆ. ಚಿಕ್ಕಜಂತಕಲ್ – ಕಂಪ್ಲಿ ಬಳಿ ಇರುವ ಸುಮಾರು ಒಂದು ಕಿಲೋ ಮೀಟರ್ ಉದ್ದದ ಸೇತುವೆಯೇ ಈ ಎರಡೂ ತಾಲೂಕುಗಳನ್ನು ವಿಭಜಿಸಿದೆ.
ಕಂಪ್ಲಿಯ ಬಹುತೇಕ ಜನರು ಶಿಕ್ಷಣ, ಆರೋಗ್ಯ, ತರಕಾರಿ, ಹಣ್ಣು, ಕಿರಾಣಿ, ಕಬ್ಬಿಣ ಸೇರಿದಂತೆ ವಿವಿಧ ಸಾಮಗ್ರಿಗಳ ಖರೀದಿಯಂತಹ ಕಾರಣಕ್ಕೆ ಗಂಗಾವತಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಇದೀಗ ಕಂಪ್ಲಿ ಸೇತುವೆ ಮುಳುಗಡೆಯಾದರೆ, ಜನರು ಇನ್ನಿಲ್ಲದಂತೆ ಪರದಾಡುವ ಸನ್ನಿವೇಶ ನಿರ್ಮಾಣವಾಗಲಿದೆ.
ಕೇವಲ ಒಂದು ಕಿಲೋ ಮೀಟರ್ ಅಂತರದಲ್ಲಿರುವ ಗಂಗಾವತಿಗೆ ತಾಲೂಕಿನ ಗಡಿಗೆ ಬರಲು ಬುಕ್ಕಸಾಗರ, ಕಡೇಬಾಗಿಲು ಸೇತುವೆಯನ್ನು ದಾಟಿಕೊಂಡು ಸುಮಾರು 30 ಕಿಲೋ ಮೀಟರ್ ಸುತ್ತು ಬಳಸಿ ಬರಬೇಕಾದ ಸ್ಥಿತಿ ಇದೆ. ಮುಖ್ಯವಾಗಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಇದು ಹಲವು ವರ್ಷಗಳಿಂದಲೂ ದೊಡ್ಡ ಸಮಸ್ಯೆಯಾಗಿದೆ.
ಗ್ರಾಮೀಣ ಭಾಗದಲ್ಲಿ ಡಂಗೂರ:
ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ನದಿಯ ಸನೀಹಕ್ಕೆ ಹೋಗದಂತೆ ನದಿಪಾತ್ರದ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಡಂಗೂರ ಸಾರಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ಹೇಳಿದ್ದಾರೆ.
ಆನೆಗೊಂದಿ, ಸಣಾಪುರ, ಸಂಗಾಪುರ, ಚಿಕ್ಕಜಂತಕಲ್ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಹಳ್ಳಿಗಳಲ್ಲಿ ಡಂಗೂರ ಸಾರುವ ಮೂಲಕ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಲರ್ಟ್ ಇರುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ ಎಂದು ತಾಪಂ ಅಧಿಕಾರಿ ತಿಳಿಸಿದ್ದಾರೆ.