Menu

1 ಕೋಟಿ ಸಾಲ ಪಡೆದು ವಂಚನೆ: ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ದ ಪ್ರಕರಣ ದಾಖಲು!

sharanu salagar

ಬೀದರ್: 2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾಲವಾಗಿ ಪಡೆದಿದ್ದ 99 ಲಕ್ಷ ರೂ. ಹಿಂತಿರುಗಿಸದೇ ವಂಚಿಸಿದ್ದಾರೆ ಎಂದು ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶಾಸಕರ ದೂರದ ಸಂಬಂಧಿ ಎಂದು ಹೇಳಲಾಗುವ ದೂರುದಾರರು, ಶರಣು ಸಲಗರ್ ಚುನಾವಣಾ ಸಂಬಂಧಿತ ವೆಚ್ಚಗಳಿಗಾಗಿ ಆರ್ಥಿಕ ಸಹಾಯವನ್ನು ಕೋರಿದ್ದರು. 2023ರ ಜನವರಿ ಮತ್ತು ಫೆಬ್ರುವರಿ ನಡುವೆ ಬಹು ಕಂತುಗಳಲ್ಲಿ ಹಣವನ್ನು ಪಡೆದಿದ್ದರು ಮತ್ತು ಆರು ತಿಂಗಳೊಳಗೆ ಸಾಲ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು.

ದೂರುದಾರರು ಎರಡು ವರ್ಷ ಕಾಯ್ದರೂ ಹಣ ಹಿಂದಿರುಗಿಸಿಲ್ಲ. ಪದೇ ಪದೆ ಹಣ ನೀಡುವಂತೆ ಕೇಳಿದರೂ ಶಾಸಕರು ಹಣ ಹಿಂದಿರುಗಿಸುವ ಯಾವುದೇ ಲಕ್ಷಣಗಳನ್ನು ತೋರಿಸದಿದ್ದಾಗ, 2025ರ ಸೆಪ್ಟೆಂಬರ್ 14 ರಂದು ಹಿರಿಯರ ಸಮ್ಮುಖದಲ್ಲಿ ಸಭೆ ಸೇರಿದ್ದಾರೆ. ಅಲ್ಲಿ ಶಾಸಕರು ಹಣ ನೀಡುವುದಾಗಿ ಒಪ್ಪಿಕೊಂಡು, ಖಾಲಿ ಚೆಕ್ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 16 ರಂದು ದೂರುದಾರರ ಕುಟುಂಬ ಸದಸ್ಯರು ಚೆಕ್ ಅನ್ನು ಬ್ಯಾಕಿಂಗೆ ಹಾಕಬಹುದೇ ಎಂದು ಖಚಿತಪಡಿಸಿಕೊಳ್ಳಲು ಶಾಸಕರ ನಿವಾಸಕ್ಕೆ ಭೇಟಿ ನೀಡಿದಾಗ, ಶರಣು ಸಲಗರ್ ಗಲಾಟೆ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ದೂರುದಾರರ ಪ್ರಕಾರ, ಶಾಸಕರ ಬೆದರಿಕೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದ್ದು, ಅದನ್ನು ಎಲೆಕ್ಟ್ರಾನಿಕ್ ಪುರಾವೆಯಾಗಿ ದೂರಿನ ಜೊತೆಗೆ ಸಲ್ಲಿಸಲಾಗಿದೆ. ಅದರ ಮರುದಿನ ಸೆಪ್ಟೆಂಬರ್ 18 ರಂದು ದೂರುದಾರರ ಬ್ಯಾಂಕ್‌ಗೆ ಚೆಕ್ ಹಾಕಲು ಮುಂದಾದಾಗ, ಆ ಬ್ಯಾಂಕಿನಲ್ಲಿದ್ದ ಶಾಸಕರ ಖಾತೆಯನ್ನು ಮುಚ್ಚಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ, ಸೆಪ್ಟೆಂಬರ್ 22 ರಂದು ನಿಗದಿತ ಅವಧಿಯೊಳಗೆ ಹಣ ಪಾವತಿಸುವಂತೆ ಕೋರಿ ಶಾಸಕರಿಗೆ ಕಾನೂನು ನೋಟಿಸ್ ನೀಡಲಾಗಿದೆ. ಆಗಲೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *