Wednesday, August 13, 2025
Menu

ರಾಜ್ಯಪಾಲ, ಲಕ್ಷ್ಮಿ ಹೆಬ್ಬಾಳ್ಕರ್‌ ನಕಲು ಸಹಿ ಹಾಗೂ ಲೆಟರ್‌ಹೆಡ್‌ ಬಳಸಿ 30 ಲಕ್ಷಕ್ಕೂ ಅಧಿಕ ವಂಚನೆ

belagavi news

ರಾಜ್ಯಪಾಲ , ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ನಕಲು ಸಹಿ ಹಾಗೂ ಸಚಿವರ ಲೆಟರ್‌ಹೆಡ್‌ಗಳನ್ನು ಬಳಸಿ ನೌಕರಿ ಕೊಡಿಸುವ ಆಮಿಷವೊಡ್ಡಿ ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು  ಸುದ್ದಿಗೋಷ್ಠಿ ನಡೆಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೌಕರಿ ಆಮಿಷವೊಡ್ಡಿ ಲಕ್ಷಾಂತರ ಹಣ ವಂಚಿಸಿದ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರೂ ಪತ್ರ ಬರೆದಿದ್ದರು. ವಂಚನೆ ಒಳಗಾದವರು ದೂರು ದಾಖಲಿಸಲು ಮುಂದೆ ಬಾರದ ಕಾರಣದಿಂದ ಪ್ರಕರಣ ದಾಖಲಾತಿಯಲ್ಲಿ ವಿಳಂಬವಾಗಿದೆ ಎಂದು ಹೇಳಿದರು.

ಪ್ರಮುಖ ಆರೋಪಿಯನ್ನು ಮಂಜುನಾಥ ಮಲ್ಲಸರ್ಜ ಎಂದು ಗುರುತಿಸಲಾಗಿದ್ದು, ಈತ 14 ಮಂದಿಯಿಂದ 30 ಲಕ್ಷಕ್ಕೂ ಅಧಿಕ ಹಣ ಪಡೆದಿರುವ ಬಗ್ಗೆ ದೂರು ಇದೆ. ಈತ ರಾಜ್ಯಪಾಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಅವರ ಆಪ್ತಸಹಾಯಕರ ಸಹಿಯನ್ನೂ ನಕಲು ಮಾಡಿದ್ದಾನೆ. ಜೊತೆಗೆ ಸಚಿವರ ಲೆಟರ್‌ಹೆಡ್‌ಗಳನ್ನು ಬಳಸಿರುವುದು ಕೂಡ ಪತ್ತೆಯಾಗಿದೆ ಎಂದು ತಿಳಿಸಿದರು.

ಕೆಲ ಸಾಮಾಜಿಕ ಕಾರ್ಯಕರ್ತರು ಈ ಪ್ರಕರಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಆಪ್ತಸಹಾಯಕ ಸೋಮನಗೌಡ ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರ ತನಿಖೆ ಹಂತದಲ್ಲಿದೆ. ಸದ್ಯಕ್ಕೆ ಸೋಮನಗೌಡ ಭಾಗಿಯಾದ ಬಗ್ಗೆ ಯಾವುದೇ ಸಾಕ್ಷಿಗಳು ಇಲ್ಲ. ಇದೆಲ್ಲವನ್ನೂ ತನಿಖೆ ಮಾಡುವಂತೆ ಸ್ವತಃ ಸಚಿವರೇ ಸೂಚಿಸಿದ್ದಾರೆ ಎಂದರು.

ಇನ್ನು ವಂಚನೆಯಾದ ಬಗ್ಗೆ ಕಾವ್ಯಾ ಎಂಬವರು ಹೇಳಿಕೊಂಡರು. ಆದರೆ ಈ ಬಗ್ಗೆ ಅವರು ದೂರು ನೀಡಲಿಲ್ಲ. ನಾಲ್ಕು ತಿಂಗಳ ಬಳಿಕ ಇನ್ನೊಬ್ಬ ಮಹಿಳೆ ಲಿಖಿತ ದೂರು ನೀಡಿದ್ದರಿಂದ ಈಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಆರೋಪಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದ್ದು, ಆತನನ್ನು ಬಂಧಿಸಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಜಯಂತ ತಿಣೈಕರ್, ಈ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡ ಇದೆ. ಫೋನ್ ಪೇ, ಬ್ಯಾಂಕ್ ಖಾತೆ ಮೂಲಕ 34 ಲಕ್ಷಕ್ಕಿಂತ ಹೆಚ್ಚಿನ ಪಡೆದು ವಂಚಿಸಿದ್ದಾರೆ. ಆದರೆ ರಾಜಕೀಯ ಒತ್ತಡದಿಂದ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ವಹಿಸುತ್ತಿಲ್ಲ. ಅನ್ಯಾಯಕ್ಕೆ ಒಳಗಾದವರನ್ನು ಪದೇ ಪದೆ ಪೊಲೀಸ್ ಠಾಣೆಗೆ ಕರೆಸಿ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

Related Posts

Leave a Reply

Your email address will not be published. Required fields are marked *