ಆರು ದಶಕಗಳಿಗೂ ಹೆಚ್ಚು ಕಾಲ ವಿಶಿಷ್ಟ ಸೇವೆ ಸಲ್ಲಿಸಿದ ನಂತರ, ಭಾರತೀಯ ವಾಯುಪಡೆಯ (Indian Air Force) ಮಿಗ್-21 ಫೈಟರ್ ಜೆಟ್ (MiG-21 Fighter Jet) ಶುಕ್ರವಾರ ಅಧಿಕೃತವಾಗಿ ನಿವೃತ್ತಿ ಪಡೆದಿದೆ. ಹೌದು, 1965, 1971 ಮತ್ತು 1999ರ ಭಾರತ–ಪಾಕಿಸ್ತಾನ ಯುದ್ಧಗಳಲ್ಲಿ ಹಾಗೂ 2019ರ ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಮಿಗ್–21 ನಿರ್ಣಾಯಕ ಪಾತ್ರವಹಿಸಿ ದೇಶದ ಹೆಮ್ಮೆಯ ಪ್ರತೀಕವಾಗಿತ್ತು.
ಶುಕ್ರವಾರ ಚಂಡೀಗಢ ವಾಯುನೆಲೆಯಲ್ಲಿ ನಡೆದ ಭಾವನಾತ್ಮಕ ವಿದಾಯ ಸಮಾರಂಭದಲ್ಲಿ, ಈ ಯುದ್ಧವಿಮಾನ ತನ್ನ ಕೊನೆಯ ಹಾರಾಟ ನಡೆಸಿತು.
1963ರಲ್ಲಿ ಭಾರತೀಯ ವಾಯುಪಡೆಯ ಸೇವೆಗೆ ಸೇರಿದ ಮಿಗ್–21, ಹಲವು ಐತಿಹಾಸಿಕ ಯುದ್ಧಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. 1965, 1971 ಮತ್ತು 1999ರ ಭಾರತ–ಪಾಕಿಸ್ತಾನ ಯುದ್ಧಗಳಲ್ಲಿಯೂ, 2019ರ ಬಾಲಾಕೋಟ್ ವೈಮಾನಿಕ ದಾಳಿಯಲ್ಲಿಯೂ ಈ ಯುದ್ಧವಿಮಾನ ತನ್ನ ಶೌರ್ಯವನ್ನು ಪ್ರದರ್ಶಿಸಿತು. ಈ ಕಾರಣದಿಂದ ಮಿಗ್–21 ಕೇವಲ ಫೈಟರ್ ಜೆಟ್ ಅಲ್ಲ, ರಾಷ್ಟ್ರದ ಭಾವನೆ ಮತ್ತು ಹೆಮ್ಮೆಯ ಸಂಕೇತವಾಗಿದೆ.
ವಿದಾಯ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, “ಮಿಗ್–21 ನಮ್ಮ ವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ನಮ್ಮ ಸ್ಥಾನವನ್ನು ದೃಢಪಡಿಸಿದೆ. ಇದು ಕೇವಲ ಯುದ್ಧವಿಮಾನವಲ್ಲ, ಬದಲಾಗಿ ನಾವು ಕುಟುಂಬದಂತೆ ಬಾಂಧವ್ಯ ಹೊಂದಿರುವ ಸದಸ್ಯ” ಎಂದು ಹೇಳಿದರು.
ಮಿಗ್ 21 ಕುರಿತು
ಉತ್ಪಾದನೆ: ಮಿಗ್-21 ಜಗತ್ತಿನ ಅತ್ಯಂತ ಹೆಚ್ಚು ಉತ್ಪಾದನೆ ಕಂಡ ಸೂಪರ್ಸಾನಿಕ್ ಯುದ್ಧ ವಿಮಾನ — 11,000ಕ್ಕೂ ಹೆಚ್ಚು ನಿರ್ಮಾಣ.
ಶಕ್ತಿ ಮತ್ತು ವೇಗ: ತನ್ನ ಕಾಲಕ್ಕೆ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನ. ಗರಿಷ್ಠ ವೇಗ ಪ್ರತಿ ಗಂಟೆಗೆ ಅಂದಾಜು 2,200 ಕಿಮೀ (ಶಬ್ದದ ವೇಗದ 2 ಪಟ್ಟು).
ಏರುವ ಸಾಮರ್ಥ್ಯ: ಪ್ರತಿ ನಿಮಿಷಕ್ಕೆ 46,250 ಅಡಿ ಏರಬಲ್ಲದು — ಎಫ್-16A ಯುದ್ಧ ವಿಮಾನದ ಮಟ್ಟಕ್ಕೆ ಸಮಾನ.
ಆಯುಧ ಸಾಮರ್ಥ್ಯ: 23 ಎಂಎಂ ರ್ಯಾಪಿಡ್ ಫೈರ್ ಕ್ಯಾನನ್ (200 ಗುಂಡುಗಳು, ಪ್ರತಿ ಸೆಕೆಂಡಿಗೆ 50), ಜೊತೆಗೆ ಬಾಂಬ್ಗಳು, ರಾಕೆಟ್ಗಳು, ಆಧುನಿಕ ಗಾಳಿಯಿಂದ-ಗಾಳಿಗೆ ಕ್ಷಿಪಣಿಗಳು.
ಭಾರತದ ಆಯ್ಕೆ: 1961ರಲ್ಲಿ ಪಾಶ್ಚಾತ್ಯ ವಿಮಾನಗಳ ಬದಲು ಭಾರತ ಮಿಗ್-21 ಆಯ್ಕೆ ಮಾಡಿತು.
ಸೋವಿಯತ್ ಬೆಂಬಲ: ಸೋವಿಯತ್ ಒಕ್ಕೂಟ ಕೇವಲ ವಿಮಾನಗಳನ್ನು ಪೂರೈಸಲಿಲ್ಲ, ತಂತ್ರಜ್ಞಾನವನ್ನೂ ಹಂಚಿಕೊಂಡಿತು.
ಮಿಗ್–21 ನಿವೃತ್ತಿಯೊಂದಿಗೆ ಭಾರತೀಯ ವಾಯುಪಡೆಯ ಇತಿಹಾಸದ ಒಂದು ಮಹತ್ವದ ಅಧ್ಯಾಯ ಮುಕ್ತಾಯಗೊಂಡಿದೆ.