ಪವಿತ್ರ ಚಾರ್‌ಧಾಮ್ ಯಾತ್ರೆಯು ಇಂದಿನಿಂದ ಆರಂಭಗೊಳ್ಳಲಿದೆ. ಈ ಬಾರಿ ಚಾರ್‌ಧಾಮ್ ಯಾತ್ರೆಗೆ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಪ್ರಯಾಣ ಮಾರ್ಗದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಚಾರ್‌ಧಾಮ್ ಯಾತ್ರೆ ಸಾಗುವ ಹಾದಿಯ ಮತ್ತು ಸುತ್ತಮುತ್ತ ಭದ್ರತೆ ಬಿಗಿಗೊಳಿಸಲಾಗಿದೆ.
ದೇವಭೂಮಿ ಎಂದೂ ಹೆಸರಾಗಿರುವ ಉತ್ತರಾಖಂಡವು ಹಲವಾರು ದೇವಾಲಯಗಳಿಗೆ ನೆಲೆಯಾಗಿದೆ. ಉತ್ತರಾಖಂಡದಲ್ಲಿ ಭಕ್ತರು ಭೇಟಿ ನೀಡುವ ಅಸಂಖ್ಯಾತ ಧಾರ್ಮಿಕ ತಾಣಗಳಲ್ಲಿ ಚಾರ್ ಧಾಮ್ ಯಾತ್ರೆ ಪ್ರಮುಖವಾದುದು.
ಮುಂದಿನ 6 ತಿಂಗಳು ಯಾತ್ರಿಗಳು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಬಹುದಾಗಿದೆ. ಕೇದಾರನಾಥ ಧಾಮವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು, ಶಿವನಿಗೆ ಸಮರ್ಪಿತವಾಗಿದೆ. ಬದರಿನಾಥ ಧಾಮವು ವಿಷ್ಣುವಿಗೆ ಅರ್ಪಿತವಾಗಿದೆ. ಗಂಗೋತ್ರಿ ಧಾಮವು ಗಂಗಾ ಮಾತೆಗೆ ಮತ್ತು ಯಮುನೋತ್ರಿಯು ಯಮುನೆಗೆ ಅರ್ಪಿತಗೊಂಡಿದೆ.