ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ ಕೆ ಸುಧಾಕರ್‌ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಲೋಕಸಭಾ ಚುನಾವಣೆ ವೇಳೆ ಮಾದನಾಯಕನಹಳ್ಳಿ ಮನೆಯಲ್ಲಿ 4.8 ಕೋಟಿ ರೂ. ಪತ್ತೆಯಾಗಿತ್ತು. ಹಣ ಕೆ ಸುಧಾಕರ್ ಗೆ ಸೇರಿದ್ದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣ ರದ್ದು ಕೋರಿ ಡಾ.ಕೆ. ಸುಧಾಕರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರುಣ್ ಅವರಿದ್ದ ಏಕಸದಸ್ಯ ಪೀಠ ಎಫ್‌ಐಆರ್ ರದ್ದುಗೊಳಿಸಿ ಆದೇಶ ಪ್ರಕಟಿಸಿದೆ.
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಹಿಂದಿನ ದಿನ ಚುನಾವಣಾ ಆಯೋಗದ ಅಧಿಕಾರಿಗಳು ಗೋವಿಂದಪ್ಪ ಅವರ ಮನೆಯಿಂದ 4.8 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದರು. ಈ ಹಣ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಉದ್ದೇಶದಿಂದ ಇರಲಿಸಲಾಗಿತ್ತು ಎಂದು ಆರೋಪಿಸಲಾಗಿತ್ತು.
ಪ್ರಕರಣದ ಕುರಿತು ಚುನಾವಣಾ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು ನೆಲಮಂಗಲ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸುಧಾಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಾಂಗ್ರೆಸ್ ಪಕ್ಷ ಇದನ್ನು ಡಾ.ಕೆ.ಸುಧಾಕರ್ ಹಾಗೂ ಬಿಜೆಪಿ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಿತ್ತು . ಆದರೆ ಹೈಕೋರ್ಟ್ ತೀರ್ಪಿನಿಂದ ಬಿಜೆಪಿ ಶಿಬಿರದಲ್ಲಿ ಸಂತೋಷ ವ್ಯಕ್ತವಾಗಿದ್ದು, ಈ ಆರೋಪ ಸಂಸದ ಡಾ.ಕೆ.ಸುಧಾಕರ್ ಅವರ ವಿರುದ್ಧ ನಡೆದಿದ್ದ ಷಡ್ಯಂತ್ರ ಎಂಬುದು ಸಾಬೀತಾಗಿದೆ.