ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ವಿಮಾನ ಹಾರಾಟ ಆರಂಭ...!!
ಶಿವಮೊಗ್ಗ : ಶಿವಮೊಗ್ಗದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಗುರುವಾರ ಆಗಮಿಸಲಿದ್ದು, ಇಂದಿನಿಂದ ಪ್ರಯಾಣ ಆರಂಭವಾಗಲಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಲಿದೆ. ಇಂಡಿಗೋ ವಿಮಾನದಲ್ಲಿ ಮಾಜಿ ಸಿಎಂ ಬಿಎಸ್ ವೈ, ಸಚಿವ ಎಂಬಿ ಪಾಟೀಲ್ ಜೊತೆ ಕೆಲವು ಜನ ಪ್ರತಿನಿಧಿಗಳೂ ಸಹ ಪ್ರಯಾಣಿಸಿದ್ದರು. ಹೌದು, ಇಂದು ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಪ್ರಯಾಣ ಆರಂಭವಾಗಿದ್ದು, ಶಿವಮೊಗ್ಗದಲ್ಲಿ ಇಳಿದ ಮೊದಲ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮೂಲಕ ಸ್ವಾಗತ ಮಾಡಲಾಗಿದೆ. ವಿಮಾನದಲ್ಲಿ ಆಗಮಿಸಿದ ಗಣ್ಯರನ್ನು ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಸ್ವಾಗತ ಮಾಡಿದರು. ಇನ್ನು, ವಿಮಾನದಲ್ಲಿ ಪ್ರಯಾಣಿಸುವುದಕ್ಕೂ ಮೊದಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ರೈತರು ಕಾರಣ. ಸಣ್ಣ ಸಮಸ್ಯೆ ಇಲ್ಲದೇ ಜಮೀನು ಬಿಟ್ಟು ಕೊಟ್ಟಿದ್ದಾರೆ. ಇವತ್ತು ನನ್ನ ಜೊತೆ ಕೆಲ ರೈತರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ವಿಮಾನ ನಿಲ್ದಾಣದಿಂದ ಕೈಗಾರಿಕೆ, ಬೇರೆ ಕಾರಣಕ್ಕೂ ಅನುಕೂಲ ಆಗಲಿದೆ. ಮುಂದೆ ಓಡಾಡಲು ಬಹಳ ಅನುಕೂಲ ಆಗಲಿದೆ. ಏರ್ಪೋರ್ಟ್ ಆಗಲು ಕಾರಣರಾದ ಎಲ್ಲರಿಗೂ ಅಭಿನಂದನೆಗಳು. ಸಂಸದ ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಆಗಿದ್ದಾಗಿನ ಕನಸು ನನಸಾಗಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದರು. ಈ ಕುರಿತಾಗಿ ಎಂಬಿ ಪಾಟೀಲ್ ಅವರು ಟ್ವಿಟ್ಟರ್ ನಲ್ಲಿ ಬರೆದು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ಮೊಟ್ಟ ಮೊದಲ ಇಂಡಿಗೋ ವಿಮಾನದ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಿವಮೊಗ್ಗ ಸಂಸದರಾದ ಬಿವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬಿವೈ ವಿಜಯೇಂದ್ರ, ಗೋಪಾಲ ಕೃಷ್ಣ ಬೇಲೂರು, ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಹಾಲಪ್ಪ, ಭಾರತಿ ಶೆಟ್ಟಿ ಸೇರಿದಂತೆ ಹಲವರು ನಮ್ಮೊಂದಿಗೆ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದರು. ಶಿವಮೊಗ್ಗ ನಗರದಿಂದ 10 ಕಿ.ಮೀ ದೂರದಲ್ಲಿ ಇರುವ ಸೋಗಾನೆ ಬಳಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಈ ವರ್ಷದ ಫೆಬ್ರವರಿ 27ರಂದು ಯಡಿಯೂರಪ್ಪ ಅವರ ಹುಟ್ಟು ಹಬ್ಬದ ದಿನದಂದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿಲ್ದಾಣವನ್ನು ಉದ್ಘಾಟಿಸಿದ್ದರು. ಇಂದಿನಿಂದ ವಿಮಾನ ಹಾರಾಟಕ್ಕೆ ಅಧಿಕೃತ ಚಾಲನೆ ದೊರಕಿದೆ ಎಂದು ಹೇಳಿದರು.