ಕೋಲಾರ : 10 ಕೆಜಿ ಪಡಿತರ ಅಕ್ಕಿ ವಿತರಣೆ ಸಾಧ್ಯವಾಗದೆ ೫ ಕೆಜಿ ಅಕ್ಕಿ ಬದಲು ಹಣವನ್ನು ನೀಡಲಾಗುತ್ತಿದ್ದೇವೆ. ಈಗಾಗಲೇ ತೆಲಂಗಾಣ ರಾಜ್ಯದವರೊಂದಿಗೆ ಚರ್ಚಿಸಿದ್ದು, ಅಕ್ಕಿ ತರುವ ಪ್ರಯತ್ನ ಮಾಡುತ್ತಿರುವುದಾಗಿ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 5 ಗ್ಯಾರೆಂಟಿಗಳನ್ನು ಜಾರಿಗೊಳಿಸುವುದಾಗಿ ನಾವು ತಿಳಿಸಿದ್ದೆವು. ಚುನಾವಣೆಯಲ್ಲಿ ಜನರು ನಮಗೆ ಆದೇಶ ಕೊಟ್ಟಿದ್ದಾರೆ. ಅದನ್ನು ಪಾಲಿಸುತ್ತಿದ್ದು, 5 ಗ್ಯಾರೆಂಟಿಗಳ ಪೈಕಿ 4 ಅನ್ನು ನೀಡಿದ್ದು, ಸದ್ಯದಲ್ಲೇ ಉಳಿದ ಗ್ಯಾರೆಂಟಿಯನ್ನೂ ಜಾರಿಗೊಳಿಸಲಾಗುವುದು.
ಅಕ್ಕಿ ವಿತರಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 120ರೂಗಳನ್ನು ನೀಡಲಾಗುತ್ತಿದೆ. 1.10 ಕೋಟಿ ಕಾರ್ಡುಗಳ ಪೈಕಿ ಸುಮಾರು 3.5 ಕೋಟಿ ಮಂದಿಗೆ ಹಣವನ್ನು ಪಾವತಿ ಮಾಡಿದ್ದೇವೆ. ಅಕ್ಕಿ ಸಿಗುವವರೆಗೂ ಹಣ ನೀಡುವ ಪ್ರಕ್ರಿಯೆ ಮುಂದುವರೆಸುತ್ತೇವೆ. ತೆಲಂಗಾಣದಿಂದ ಅಕ್ಕಿ ತರುವ ಪ್ರಯತ್ನ ಮಾಡುತ್ತಿದ್ದು, ಶೀಘ್ರದಲ್ಲೇ ನೀಡಲಾಗುವುದು ಎಂದರು.
ಡಿಸಿಎಂಗಳ ಆಯ್ಕೆ, ಕೋಲಾರದಲ್ಲಿ ನನ್ನ ಸ್ಪರ್ಧೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಹೈಕಮಾಂಡ್ ರಾಜ್ಯದ ನಾಯಕರ ಸಲಹೆಗಳನ್ನು ಪಡೆದು, ತೀರ್ಮಾನ ಮಾಡಲಿದೆ. ನುಡಿದಂತೆ ನಡೆಯುವ ಬದ್ಧತೆ ನಮ್ಮ ಸರಕಾರದ್ದು ಎಂದು ತಿಳಿಸಿದರು.
ಸಂದೇಶಕ್ಕೆ ಫಲಿತಾಂಶ ಬಂದಿದೆ :
ಡಿಸಿಸಿ ಬ್ಯಾಂಕ್ಗೆ ನಾಮನಿರ್ದೇಶಿತರಾಗಿ ಆಯ್ಕೆಯಾಗಿರುವ ಎಲ್.ಎ.ಮಂಜುನಾಥ್ ಅವರ ಸ್ಥಾನ ರದ್ದಿಗೆ ಅನೇಕರು ಪ್ರಯತ್ನ ಪಡುತ್ತಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಕಲಹ ಇರಬಾರದು ಎಂದು ನಾನು ಚುನಾವಣೆಗೆ ಮೊದಲೂ, ಆನಂತರವೂ ಹೇಳಿದ್ದೆ. ಆಗಿದ್ದು ಆಗೋಗಿದೆ. ಎಲ್ಲರೂ ಒಟ್ಟಿಗೆ ಇರೋಣ ಎಂದು ಸಂದೇಶ ನೀಡಿದ್ದು, ಅದಕ್ಕೆ ಫಲಿತಾಂಶ ಬಂದಿದೆ.
ಸಣ್ಣಪುಟ್ಟ ಸಮಸ್ಯೆಗಳನ್ನು ರಾಜ್ಯ ಮಟ್ಟದಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ. ಎಲ್.ಎ.ಮಂಜುನಾಥ್ ಸೇರಿದಂತೆ ಎಲ್ಲರ ವಿಚಾರವಾಗಿ ತೀರ್ಮಾನ ಕೈಗೊಳ್ಳುತ್ತೇವೆ. ನಾವೆಲ್ಲರೂ ಸೇರಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತೇವೆ. ಈ ಹಿಂದೆ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಕೆಲವರು ಬೇರೆ ರೀತಿ ನಡೆದುಕೊಂಡಿದ್ದರು. ನಾನು ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದೇನೆ. ಹಳೆಯದನ್ನು ಮರೆತು ಮುಂದುವರೆಯುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿವರ್ಷದಂತೆ ನಾನು ಕುರುಡುಮಲೆ ದೇವಾಲಯಕ್ಕೆ ಭೇಟಿ ನೀಡುತ್ತಿದ್ದೇನೆ. 35-40 ವರ್ಷದಿಂದಲೂ ನನ್ನ ಜತೆಗಿರುವವರು ಪಾಲ್ಗೊಳ್ಳುತ್ತಿದ್ದಾರೆ. ಕುರುಡುಮಲೆಗೆ ಭೇಟಿ ನೀಡಿ ರಥೋತ್ಸವದಲ್ಲಿ ಪಾಲ್ಗೊಂಡ ಬಳಿಕ, ತಾಲೂಕು ಮಟ್ಟದ ಅಧಿಕಾರಿಗಳು, ತಹಸೀಲ್ದಾರ್ ರೊಂದಿಗೆ ಬರಗಾಲ ಸಂಬಂಧ ಸಭೆ ನಡೆಸಿ, ಆಂಜನೇಯಸ್ವಾಮಿ ದೇವಾಲಯ, ದರ್ಗಾಗೆ ಭೇಟಿ ನೀಡುತ್ತೇನೆ ಎಂದರು. ಇದಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಕಾಂಗ್ರೆಸ್ ಮುಖಂಡರು ಸಚಿವ ಕೆ.ಎಚ್.ಮುನಿಯಪ್ಪರನ್ನು ಸನ್ಮಾನಿಸಿ, ಸ್ವಾಗತಿಸಿದರು.