ಆಸ್ತಿ ಆಸೆಗೆ ಹಸುಗೂಸನ್ನೇ ಕೊಂದ ಪಾಪಿ ಮಹಿಳೆ...!!
ಯಾದಗಿರಿ: ಆಸ್ತಿಗಾಗಿ ಮನುಷ್ಯರು ಏನು ಬೇಕಾದರೂ ಮಾಡುವಷ್ಟು ಕೆಳಮಟ್ಟಕ್ಕೆ ಇಳಿಯಬಾರದು. ಆದರೆ, ಇಲ್ಲೊಬ್ಬ ಮಹಿಳೆ ತನಗೆ ಹಾಗೂ ತನ್ನ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕಡಿಮೆಯಾಗುತ್ತದೆ ಎಂದು ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನೇ ಅಮಾನುಷವಾಗಿ ಕೊಂದಂತಹ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ 11 ವರ್ಷಗಳ ಹಿಂದೆ ಮೊದಲು ಶ್ರೀದೇವಿಯನ್ನ ಮದುವೆಯಾಗಿದ್ದ. ಆದರೆ ಮಕ್ಕಳಾಗದ ಹಿನ್ನೆಲೆ ಕಳೆದ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದ. ದೇವಮ್ಮಳನ್ನು ಮದುವೆಯಾದ ನಂತರ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತನ್ನ ತವರು ಮನೆಯಲ್ಲಿ ಶ್ರೀದೇವಿ ವಾಸವಿದ್ದಳು. ಕಳೆದ ಮೂರು ವರ್ಷಗಳ ಹಿಂದೆ ಮಧ್ಯಪ್ರವೇಶಿಸಿದ ಹಿರಿಯರು, ರಾಜಿ ಸಂಧಾನ ನಡೆಸಿದ್ದಾರೆ. ಇದಾದ ನಂತರ ಆಕೆ ಬಬಲಾದ ಗ್ರಾಮದ ಗಂಡನ ಮನೆಗೆ ಬಂದಿದ್ದಳು. ಕಳೆದ ಐದು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಆದರೆ ಅದಾಗಲೇ ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದರು. ಸಮಸ್ಯೆ ಆದದ್ದು ಇಲ್ಲೇ. ಇದೀಗ ಶ್ರೀದೇವಿಗೆ ಮಗು ಜನಿಸಿದ್ದು ಇದರಿಂದಾಗಿ ಆಸ್ತಿ ಪಾಲಾಗುವಾಗ ತನಗೆ ಕಡಿಮೆ ಆಸ್ತಿ ಸಿಗಲಿದೆ ಎಂದು ನಂಬಿದ ದೇವಮ್ಮ, ಈ ಹೀನ ಕೃತ್ಯಕ್ಕೆ ಇಳಿದಿದ್ದಾಳೆ. ತನಗೂ ತನ್ನ ಮಕ್ಕಳಿಗೂ ಆಸ್ತಿಯಲ್ಲಿ ಪಾಲು ತಪ್ಪಬಹುದು ಎಂದು ದೇವಮ್ಮ ಆಗಸ್ಟ್ 30ರಂದು ಮಾಡಬಾರದ್ದನ್ನು ಮಾಡಿದ್ದಾಳೆ. ಐದು ತಿಂಗಳ ಹಸುಗೂಸು ಸಂಗೀತಾಳಿಗೆ ಆಕೆಯ ತಾಯಿ ಎದೆಹಾಲು ಉಣಿಸುವಾಗ, ದೇವಮ್ಮ ಬಲವಂತವಾಗಿ ಮಗುವನ್ನು ಎಳೆದೊಯ್ದಿದ್ದಾಳೆ. ನಂತರ ಆಕೆ, ಮನೆಯ ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಮುಚ್ಚಿದ್ದಾಳೆ. ತಕ್ಷಣ ಆಕೆ, ಹಾಲಿನ ಬಾಟಲ್ನಲ್ಲಿ ವಿಷ ಬೆರೆಸಿದ್ದು, ಅದನ್ನು ಕೂಸಿಗೆ ಕುಡಿಸಿದ್ದಾಳೆ. ವಿಷಬೆರೆತ ಹಾಲು ಕುಡಿದ ಮೂರು ಗಂಟೆಯ ನಂತರ ಮಗುವಿನ ಬಾಯಲ್ಲಿ ನೊರೆ ಬಂದಿದೆ. ಇದರಿಂದ ಗಾಬರಿಗೊಳಗಾದ ತಾಯಿ ಶ್ರೀದೇವಿ, ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಮಾರ್ಗಮಧ್ಯೆ ಮಗು ಸಾವಿಗೀಡಾಗಿದೆ. ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿ ದೇವಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.