ಅಧಿಕೃತ ಘೋಷಣೆ : "ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ" ಚಿತ್ರವು ಡಿಜಿಟಲ್ ಪ್ಲಾಟ್ಫಾರ್ಮ್ ಆದ "ಜಂಕಾರ್ ಮ್ಯೂಸಿಕ್ ಮೂವೀಸ್" ನಲ್ಲಿ ಬಿಡುಗಡೆಗೊಂಡು ನೋಡಲು ಲಭ್ಯವಿದೆ.
ಒಬ್ಬ ಕಲಾವಿದ… ಇಪ್ಪತ್ತ ನಾಲ್ಕು ಪಾತ್ರಗಳು… ನಾಲ್ಕು ಹಾಡುಗಳು… ಹನ್ನೆರಡು ಪ್ರಾಸಂಗಿಕ ಹಾಡುಗಳು ಹೊಂದಿರುವ ಶ್ರೀ. ರವೀಂದ್ರನಾಥ್ ಠಾಗೂರ್ ಅವರ ಕಾದಂಬರಿ ಆಧರಿತ ಚಿತ್ರ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಒಂದು ವಿಶ್ವಮಟ್ಟದ ರಂಗಭೂಮಿ ಅನುಭವದ ಚಿತ್ರ. ಸಿನಿಮಾ ತಂತ್ರಗಾರಿಕೆಯಲ್ಲಿ ರಂಗಭೂಮಿಯ ನಿರೂಪಣೆ... ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಶ್ರೀ ರವೀಂದ್ರನಾಥ್ ಠಾಗೂರ್ ಅವರ “Once There was a King” ಕಾದಂಬರಿಯನ್ನು ರಂಗ ರೂಪಕ್ಕೆ ತಂದು ರಂಗಭೂಮಿಯ ಮೇಲೆ ಇಪ್ಪತ್ತೊಂದು ವರ್ಷಗಳ ಹಿಂದೆ ಯೋಗೇಶ್ ಮಾಸ್ಟರ್ ಅವರು ಮಾಡಿದ ಏಕವ್ಯಕ್ತಿ ಪ್ರದರ್ಶನದ ಪ್ರಯೋಗ ಇದು.
ಈ ಪ್ರಯೋಗವನ್ನು, ರಂಗಭೂಮಿಯಿಂದ ಚಲನಚಿತ್ರ ಮಾದ್ಯಮಕ್ಕೆ ತರುವ ಸಾಹಸ ಮಾಡಿದ್ದು ದೃಷ್ಟಿ ಮೀಡಿಯಾ ಸಂಸ್ಥೆ. ಸಿನಿಮಾ ಮಾಧ್ಯಮದಲ್ಲಿ ರಂಗಭೂಮಿಯಲ್ಲಿ ಇರುವ ಇತಿಮಿತಿಗಳನ್ನು ಮೀರಲು ಸಾಧ್ಯವಾಯಿತು. ಮೇಕಪ್, ಅಗತ್ಯದ ವೇಷಭೂಷಣ, ಬೆಳಕು ಮತ್ತು ಅಭಿನಯದ ಸೂಕ್ಷ್ಮ ಸಂವೇದನೆಗಳನ್ನು ಸೆರೆಹಿಡಿಯಲು ಸಾಧ್ಯವಾಯಿತು. ಒಟ್ಟಾರೆ ಹೇಳುವುದಾದರೆ ರಂಗ ಪ್ರಯೋಗದ ಸ್ವರೂಪವನ್ನು ಬದಲಿಸದೇ ಅದನ್ನು ಸಿನಿಮಾದ ಮೂಲಕ ಮತ್ತಷ್ಟು ಕುಸುರಿಗೊಳಿಸುವ ಕೆಲಸ ಇದಾಗಿದೆ.
ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಿತ್ರವು ದಿನಾಂಕ 09-09-2023 ರಂದು ಜಂಕಾರ್ ಮ್ಯೂಸಿಕ್ ಮೂವೀಸ್ ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಗೊಂಡಿರುವುದು ನಮಗೆ ಹೆಮ್ಮೆಯ ಸಂಗತಿ. ಈ ಕಲಾತ್ಮಕ ಚಿತ್ರವನ್ನು ತಾವೆಲ್ಲರು ನೋಡಿ ಹಾಗೂ ನಮ್ಮನ್ನು ಪ್ರೋತ್ಸಾಹಿಸಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ. ನಿಮ್ಮೆಲ್ಲರ ಸಹಕಾರ, ಪ್ರೀತಿ ಸದಾ ಇರಲಿ ಎಂದು ಸಂತೋಷ್ ಕೊಡೆಂಕೇರಿ ನಿರ್ದೇಶಕ / ನಿರ್ಮಾಪಕರು ಕೇಳಿಕೊಂಡಿದ್ದಾರೆ.
ಕತೆ ಹೇಳುವವನು, ಅವನಿಗೆ ಸಲ್ಲಬೇಕಾದ ಗೌರವ, ಕೇಳುಗನ ಮುಗ್ಧತೆ, ಕತೆಯ ಪಾತ್ರದೊಡನೆ ಕೇಳುಗನು ಗುರುತಿಸಿಕೊಳ್ಳುವಿಕೆ; ಇತ್ಯಾದಿಗಳನ್ನು ರವೀಂದ್ರನಾಥ ಟ್ಯಾಗೋರ್ ತಮ್ಮ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಕತೆಯಲ್ಲಿ ವಿವರಿಸುತ್ತಾರೆ. ಆತ್ಮಕತೆಯ ಶೈಲಿಯಲ್ಲಿ ಕತೆ ಹೇಳಿಕೊಂಡು ಹೋಗುವಾಗ ಏಳುವರ್ಷದ
ಬಾಲಕ ಒಂದು ಸಂಜೆ ತನ್ನ ಪಾಠದ ಮೇಷ್ಟ್ರ ಕೈಯಿಂದ ತಪ್ಪಿಸಿಕೊಳ್ಳಲು ತಾಯಿಯ ಬಳಿ ತಲೆ ನೋವಿನ ನಾಟಕ ಮಾಡುತ್ತಾ, ಅದನ್ನು ಬಹಳ ಹೊತ್ತು ನಿಭಾಯಿಸಲಾಗದೇ ಅಜ್ಜಿಯಿಂದ ಕತೆ ಕೇಳುವುದಕ್ಕೆ ಶರಣಾಗುತ್ತಾನೆ.
ಕತೆ ಕೇಳುವಾಗ ಕತೆಯಲ್ಲಿ ಲೋಪ ದೋಷಗಳನ್ನು ಹುಡುಕತೆ ರಸಿಕತೆಯಿಂದ ಮತ್ತು ಮುಗ್ಧತೆಯಿಂದ ಕತೆ ಕೇಳಬೇಕೆಂದು ಟ್ಯಾಗೋರ್ ಪ್ರತಿಪಾದಿಸುತ್ತಾರೆ. ಕತೆ ಕೇಳುವಾಗ ಕತೆಯೊಳಗೆ ಒಂದಾಗಿ ಮತ್ತು ಪಾತ್ರವೇ ತಾನಾಗಿ ಮನಸ್ಸು ಪರಿವರ್ತನೆ ಹೊಂದುವಂತಹ ಪ್ರಕ್ರಿಯೆಯನ್ನು ಅಲ್ಲಿ ಕಾಣಬಹುದು. ವಯಸ್ಸಿಗೆ ಬಂದ ರಾಜಕುಮಾರಿ ಏಳುವರ್ಷದ ಬಾಲಕನನ್ನು ಮದುವೆಯಾಗುವ ಬಗೆ ವಿಲಕ್ಷಣ ಎನಿಸಿದರೂ ರಾಜಕುಮಾರಿಯನ್ನು ಮದುವೆಯಾಗುವ ಆಸೆ ಮತ್ತು ಸರಸಮಯವಾದ ಹುಡುಗನ ಭಾವನೆಗಳನ್ನು ತಳ್ಳಿ ಹಾಕುವುದಿಲ್ಲ. ಹುಡುಗನ ಕಾಮನೆಗಳು ರಾಜಕುಮಾರಿಯ ಸಂಗದ ಕಲ್ಪನೆಯಲ್ಲಿ ಗರಿಗೆದರಿಕೊಳ್ಳುತ್ತಿರುತ್ತದೆ.
ಆದರೆ ಕತೆಯು ಅನಿರೀಕ್ಷಿತವಾಗಿ ದುರಂತವನ್ನು ಕಂಡಾಗ ತನ್ನನ್ನು ತಾನು ಪಾತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದ ಹುಡುಗನಿಗೆ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ತಾನು ತನ್ನ ಆಸೆಗೆ, ಆಶಯಕ್ಕೆ ಬೇಕಾದ ವಿಷಯವನ್ನು ತಾನು ಆಯ್ದುಕೊಳ್ಳುತ್ತಾನೆ. ಕತೆಗಳಲ್ಲಿ ಎಲ್ಲವನ್ನೂ ಸ್ವೀಕರಿಸಬೇಕೆನ್ನುವ ವಿಷಯವನ್ನು ಗ್ರಹಿಸಿದರೂ, ವ್ಯಕ್ತಿಗತವಾಗಿ ಒಪ್ಪುವ ಮತ್ತು ಬಿಡುವ ಸ್ವಾತಂತ್ರ್ಯವನ್ನು ತಾನೇ ಹೊಂದುತ್ತಾನೆ. ಈ ಕೃತಿ ಸಿನಿಮಾ ತಂತ್ರಗಾರಿಕೆಯಲ್ಲಿ ರಂಗಭೂಮಿಯ ನಿರೂಪಣೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.