ಬಿಪಿಎಲ್ ಕಾರ್ಡ್ ಗೊಂದಲಕ್ಕೆ ನಾನೇ ಕಾರಣ: ಸಚಿವ ಕೆಎಚ್ ಮುನಿಯಪ್ಪ
ಬಿಪಿಎಲ್ ಕಾರ್ಡ್ ರದ್ದು ಕುರಿತ ಗೊಂದಲಕ್ಕೆ ನಾನೇ ಕಾರಣರಾಗಿದ್ದು, 7 ದಿನದೊಳಗಾಗಿ ಗೊಂದಲ ಬಗೆಹರಿಸುವುದಾಗಿ ಆಹಾರ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಷನ್ ಕಾರ್ಡ್ ಗೊಂದಲಕ್ಕೆ ಅಧಿಕಾರಿಗಳು ಕಾರಣರಲ್ಲ. ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ತೆರಿಗೆದಾರರು ಹಾಗೂ ಸರ್ಕಾರಿ ನೌಕರರ ಕಾರ್ಡ್ ರದ್ದು ಮಾಡಿದ್ದೇವೆ ಹೊರತು ಬೇರೆಯವರ ಕಾರ್ಡ್ ಯಥಾವತ್ತಾಗಿ ಮುಂದುವರಿಯಲಿದೆ. 7 ದಿನದೊಳಗೆ ಬಿಪಿಎಲ್ ಕಾರ್ಡ್ ರದ್ದಾದ ಅರ್ಹರಿಗೆ ಅದೇ ಐಡಿಯಲ್ಲಿ ಲಾಗಿನ್ಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಬಿಪಿಎಲ್ನಿಂದ ವಂಚಿತರಾಗಿರುವ ಅರ್ಹರು ಯಾರೇ ಇದ್ದರೂ ಒಂದು ವಾರದೊಳಗೆ ಅವರನ್ನೆಲ್ಲಾ ಬಿಪಿಎಲ್ ವ್ಯಾಪ್ತಿಗೆ ತಂದು ಸಮಸ್ಯೆಯನ್ನು ಸರಿಪಡಿಸುತ್ತೇವೆ. ಬಿಪಿಎಲ್ಗೆ ಅನರ್ಹರೆಂದು ಕಂಡು ಬಂದವರನ್ನು ಎಪಿಎಲ್ಗೆ ಸೇರಿಸಲಾಗಿದೆ. ಬಿಪಿಎಲ್ ಗೆ ಅರ್ಹರಿದ್ದು ಎಪಿಎಲ್ ಗೆ ಸೇರಿಸಿದ್ದರೆ ಅವರನ್ನು ಪುನಃ ಬಿಪಿಎಲ್ಗೆ ಸೇರಿಸಲಾಗುವುದು ಎಂದು ಅವರು ವಿವರಿಸಿದರು.
ಅನರ್ಹ ಬಿಪಿಎಲ್ ಕಾರ್ಡ್ ಬಳಕೆದಾರರನ್ನು ಎಪಿಎಲ್ ಗೆ ಸೇರಿಸುವ ವಿಷಯದಲ್ಲಿ ಗೊಂದಲ ಉಂಟಾಗಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಿಗೆದಾರರು ಮತ್ತು ಸರ್ಕಾರಿ ನೌಕರರನ್ನು ಮಾತ್ರ ಬಿಪಿಎಲ್ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ಈ ಗೊಂದಲ ಬಗೆಹರಿಸದಿದ್ದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.