ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ವಿಧಿವಶ
ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಹಾನಗಲ್ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಮನೋಹರ್ ತಹಸೀಲ್ದಾರ್ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶಂಕರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ.
2015ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಇವರು 2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ನಾಲ್ಕು ಜನ ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನ ಮನೋಹರ್ ತಹಶೀಲ್ದಾರ್ ಅಗಲಿದ್ದಾರೆ. ಬಲಿಜ ಸಮುದಾಯಕ್ಕೆ ಸೇರಿದ್ದ ತಹಶೀಲ್ದಾರ್ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ವಿಧಾನಸಭೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
1978ರಲ್ಲಿ ಮೊದಲ ಬಾರಿಗೆ ಹಾನಗಲ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾದ ಮನೋಹರ್ ತಹಶೀಲ್ದಾರ್ ಅವರು 1989, 1999, 2013 ಸೇರಿ 4 ಬಾರಿ ಗೆಲುವು ಸಾಧಿಸಿದ್ದರು.
ಇತ್ತೀಚಿಗೆ ಸಂಸದ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದ್ದರು. ಇಂದು ಮಧ್ಯಾಹ್ನ ಮೃತದೇಹವನ್ನು ಹಾನಗಲ್ ಎನ್ಸಿಜೆಸಿ ಮಹಾವಿದ್ಯಾಲಯ ಅವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಹುಟ್ಟೂರಾದ ಅಕ್ಕಿಹೊಳಿ ಗ್ರಾಮದಲ್ಲಿರುವ ತೋಟದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.