2238 ಕೋಟಿ ಲಂಚದ ಆಮೀಷ ಒಡ್ಡಿದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ!
ಬಹುಕೋಟಿ ಲಂಚದ ಆಮೀಷ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಪ್ರಮುಖ ಉದ್ಯಮಿ ಗೌತಮ್ ಅದಾನಿ ಹಾಗೂ ಸೋದರಳಿಯ ಸಾಗರ್ ಅದಾನಿ ವಿರುದ್ಧ ಅಮೆರಿಕದ ನ್ಯೂಯಾರ್ಕ್ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.
ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಅಮೆರಿಕದಲ್ಲಿರುವ ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 2238 ಕೋಟಿ ರೂ. ಲಂಚ ನೀಡಲು ಮುಂದಾದ ಆರೋಪದ ಮೇಲೆ ನ್ಯೂಯಾರ್ಕ್ ನ್ಯಾಯಾಲಯ ಬಂಧನ ಆದೇಶ ಹೊರಡಿಸಿದ್ದು, ಈ ವಾರೆಟ್ಗಳನ್ನು ಜಾರಿಗೊಳಿಸಲು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ.
ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ, ಸೈರಿಲ್ ಕೆಬನೆಸ್, ಸಾಗರ್ ಅದಾನಿ, ವಿನೀತ್ ಜೈನ್, ರಂಜಿತ್ ಗುಪ್ತ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಸೇರಿದಂತೆ ೮ ಮಂದಿಯ ವಿರುದ್ಧ ವಂಚನೆ ಮತ್ತು ಪಿತೂರಿ ಆರೋಪ ಮಾಡಲಾಗಿದೆ.
ಕಳೆದ ವರ್ಷ ಭಾರತದಲ್ಲಿ 20,000 ಕೋಟಿ ರೂ. ಮೌಲ್ಯದ ಎಫ್ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಎಂಟರ್ಪ್ರೈಸಸ್ ಚಾಲನೆ ನೀಡುವ ಸಂದರ್ಭದಲ್ಲಿ ಹಿಂಡೆನ್ಬರ್ಗ್ ಸಂಶೋಧನಾ ವರದಿ ಪ್ರಕಟಿಸಿತ್ತು.
ಅಮೆರಿಕದಲ್ಲಿ ಅದಾನಿ ಗ್ರೀನ್ ಎನರ್ಜಿಗಾಗಿ 6,000 ಮಿಲಿಯನ್ ಅಮೆರಿಕನ್ ಡಾಲರ್ ಬಾಂಡ್ ಬಿಡುಗಡೆ ಮಾಡಿ ಹೂಡಿಕೆ ಸಂಗ್ರಹಿಸಲು ಮುಂದಾಗಿದ್ದ ಗೌತಮ್ ಅದಾನಿ ಅವರಿಗೆ ಅಮೆರಿಕ ನ್ಯಾಯಾಂಗ ಇಲಾಖೆ ಶಾಕ್ ನೀಡಿದೆ.