ಸೂರತ್ ನಲ್ಲಿ 34 ವರ್ಷದ ಬಿಜೆಪಿ ನಾಯಕಿ ಆತ್ಮಹತ್ಯೆ
34 ವರ್ಷದ ಬಿಜೆಪಿ ನಾಯಕಿ ದೀಪಿಕಾ ಪಟೇಲ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ಸೂರತ್ ನ ೩೦ನೇ ವಾರ್ಡ್ ನ ಬಿಜೆಪಿ ಮಹಿಳಾ ಮೋರ್ಚಾದ ನಾಯಕಿಯಾಗಿರುವ ದೀಪಿಕಾ ಪಟೇಲ್, ಪತಿ, ಮೂವರು ಮಕ್ಕಳು ಹಾಗೂ ಕುಟುಂಬದ ಸದಸ್ಯರನ್ನು ಅಗಲಿದ್ದಾರೆ.
ದೀಪಿಕಾ ಪಟೇಲ್ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕೂಡಲೇ ಪಾಲಿಕೆಸದಸ್ಯ ಚಿರಾಗ್ ಸೋಲಾಂಕಿ ಹಾಗೂ ಕುಟುಂಬದ ಸದಸ್ಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ನೇಣುಬಿಗಿದುಕೊಂಡ ಪರಿಣಾಮ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಪಾಲಿಕೆ ಸದಸ್ಯ ಚಿರಾಗ್ ಗೆ ಕರೆ ಮಾಡಿ ನಾನು ಒತ್ತಡದಲ್ಲಿದ್ದು, ಬದುಕಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. ಕೂಡಲೇ ಚಿರಾಗ್ ಮನೆಗೆ ಬಂದಾಗ ಬಾಗಿಲು ಹಾಕಿತ್ತು, ಬಾಗಿಲು ಒಡೆದು ನೋಡಿದಾಗ ನೇಣುಬಿಗಿದುಕೊಂಡಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಿಕಾ ಆತ್ಮಹತ್ಯೆ ಮಾಡಿಕೊಳ್ಳುವಾಗ ಪಕ್ಕದ ಕೋಣೆಯಲ್ಲಿ ೧೩, ೧೪ ಮತ್ತು ೧೬ ವರ್ಷದ ಮಕ್ಕಳು ಇದ್ದರು. ವಿಚಾರಣೆ ವೇಳೆ ಕುಟುಂಬದ ಸದಸ್ಯರ ಬಗ್ಗೆ ಯಾವುದೇ ಅನುಮಾನ ವ್ಯಕ್ತವಾಗಿಲ್ಲ. ಅಲ್ಲದೇ ಅವರಿಗೆ ಆತ್ಮಹತ್ಯೆಯ ಸುಳಿವು ಕೂಡ ಇರಲಿಲ್ಲ ಎಂದು ತಿಳಿದು ಬಂದಿದೆ.