2ನೇ ಟೆಸ್ಟ್ ನಿಂದ ವಿರಾಟ್ ಕೊಹ್ಲಿ ಹೊರಗೆ?
ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಕಾಲಿಗೆ ಬ್ಯಾಂಡೇಜ್ ಧರಿಸಿ ಓಡಾಡುತ್ತಿರುವುದು ಕಂಡು ಬಂದಿದ್ದು, ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವರೇ ಎಂಬ ಅನುಮಾನ ಉಂಟು ಮಾಡಿದೆ.
ಡಿಸೆಂಬರ್ ೬ರಿಂದ ಅಡಿಲೇಡ್ ನಲ್ಲಿ ಹೊನಲು-ಬೆಳಕಿನಡಿ ಪಿಂಕ್ ಚೆಂಡಿನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯ ಗೆದ್ದು ೫ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ೧-೦ಯಿಂದ ಮುನ್ನಡೆ ಸಾಧಿಸಿರುವ ಭಾರತ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.
ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಮಂಡಿ ನೋವಿನಿಂದ ನರಳುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯರು ಬ್ಯಾಂಡೇಜ್ ಧರಿಸಿ ಓಡಾಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಗಾಯದ ಕಾರಣ ೨ನೇ ಟೆಸ್ಟ್ ನಲ್ಲಿ ಆಡುವ ಬಗ್ಗೆ ಅನುಮಾನಗಳು ಉಂಟಾಗಿವೆ.
ವಿರಾಟ್ ಕೊಹ್ಲಿ ಪರ್ತ್ ಟೆಸ್ಟ್ ನಲ್ಲಿ ಶತಕ ಬಾರಿಸುವ ಮೂಲಕ ಒಂದೂವರೆ ವರ್ಷದ ನಂತರ ಮೊದಲ ಬಾರಿ ಟೆಸ್ಟ್ ಶತಕ ಸಿಡಿಸಿದ್ದರು. ಅಲ್ಲದೇ ೩ ವರ್ಷಗಳಲ್ಲಿ ಅವರಿಂದ ಬಂದ ಮೂರನೇ ಶತಕವಾಗಿತ್ತು. ಫಾರ್ಮ್ ಕಂಡುಕೊಂಡ ಬೆನ್ನಲ್ಲೇ ಗಾಯದ ಪಟ್ಟಿ ಸೇರಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮ ತಂಡಕ್ಕೆ ಮರಳುತ್ತಿದ್ದಾರೆ. ಇದರಿಂದ ಆರಂಭಿಕ ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ಟೆಸ್ಟ್ ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಇಬ್ಬರು ಆರಂಭಿಕರು ಮರಳುತ್ತಿರುವುದರಿಂದ ಯಾರು ತಂಡಕ್ಕೆ ಮರಳುತ್ತಾರೆ? ಯಾರು ಆರಂಭಿಕ ಸ್ಥಾನಕ್ಕೆ ಇಳಿಯುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಇಳಿಯುವ ಸಾಧ್ಯತೆ ಇದೆ. ಶುಭಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದು, ಅಭ್ಯಾಸ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ ರೋಹಿತ್ ಶರ್ಮ ಸ್ವತಃ ಹಿಂಬಡ್ತಿ ಪಡೆಯುವ ಸುಳಿವು ನೀಡಿದ್ದಾರೆ. ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್ ಜೋಸ್ ಹಾಜೆಲ್ ವುಡ್ ಸ್ಥಾನಕ್ಕೆ ಬಾಂಡ್ ಮರಳಿದ್ದಾರೆ.