ವಿಕ್ರಂಗೌಡ ಬಳಿ ಅಪಾಯಕಾರಿ ಶಸ್ತ್ರಾಸ್ತ್ರ ಇತ್ತು: ಗೃಹ ಸಚಿವ ಜಿ.ಪರಮೇಶ್ವರ್
ಉಡುಪಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೃತಪಟ್ಟ ನಕ್ಸಲ್ ವಿಕ್ರಂ ಗೌಡ ಬಳಿ ಆಟೋಮೆಟಿಕ್ ಮೆಷಿನ್ ಗನ್ ನಂತರ ಅಪಾಯಕಾರಿ ಶಸ್ತ್ರಾಸ್ತ್ರಗಳಿದ್ದವು ಎಂಬುದು ತಿಳಿದು ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಕಾರ್ಯಾಚರಣೆ ವೇಳೆ ೩ ಗುಂಡು ತಗುಲಿ ವಿಕ್ರಂ ಗೌಡ ಮೃತಪಟ್ಟಿದ್ದಾನೆ. ಈತನ ಬಳಿ ಮೆಷಿನ್ ಗನ್ ಸೇರಿದಂತೆ ಹಲವು ಅಪಾಯಕಾರಿ ಶಸ್ತ್ರಾಸ್ತ್ರಗಳಿದ್ದವು ಎಂಬುದು ತಿಳಿದು ಬಂದಿದೆ ಎಂದರು.
ವಿಕ್ರಮ್ ಮೇಲೆ ಕೊಲೆ ಆರೋಪ ಸೇರಿ 60ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಪೊಲೀಸರು ಶೂಟ್ ಮಾಡದಿದ್ದರೆ ವಿಕ್ರಮ್ ಗೌಡ ಪೊಲೀಸರನ್ನೇ ಶೂಟ್ ಮಾಡುವ ಸಾಧ್ಯತೆ ಇತ್ತು. ಹೀಗಾಗಿ ಎನ್ಕೌಂಟರ್ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ ಎಂದು ಅವರು ವಿವರಿಸಿದರು.
ವಿಕ್ರಮ್ ಗೌಡನನ್ನು ಹಾಗೇ ಬಿಟ್ಟುಕೊಂಡು ಅವರು ಏನು ಮಾಡಿದರೂ ಸರಿ ಎನ್ನುವ ಪರಿಸ್ಥಿತಿ ಇರಲಿಲ್ಲ. ವಿಕ್ರಮ್ ಗೌಡ ತಂಡದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದರಂದ ಮಾಡಲಾಗಿದೆ. ಎನ್ಕೌಂಟರ್ ಮೇಲೆ ತನಿಖೆ ಆಗಬೇಕು ಅಂತ ಹೇಳುವುದನ್ನು ಗಮನಿಸಿದ್ದೇನೆ. ಆದರೆ ಮಷಿನ್ ಗನ್ ಇಟ್ಟುಕೊಂಡಿದ್ದ 60 ಪ್ರಕರಣ ಇರುವ ವಿಕ್ರಮ್ ಗೌಡ ಎನ್ಕೌಂಟರ್ ಬಗ್ಗೆ ಯಾವ ದೃಷ್ಟಿಯಿಂದ ತನಿಖೆ ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು.
ಕೇರಳ ಮತ್ತು ತಮಿಳುನಾಡು ಭಾಗದ ಅರಣ್ಯದಲ್ಲಿ ಸುತ್ತಾಡುತ್ತಿದ್ದ ನಕ್ಸಲರ್ ಇದೀಗ ಕರ್ನಾಟಕದಲ್ಲಿ ಸಂಚರಿಸುತ್ತಿದ್ದಾರೆ. ಚಿಕ್ಕಮಗಳೂರಿನ ಕೆಸವಿನ ಮನೆಯಲ್ಲಿ ಊಟ ಮಾಡಿ ಹೋಗಿರುವುದು ತಿಳಿದು ಬಂದಿದೆ ಎಂದು ಅವರು ಹೇಳಿದರು.
ಕಾರ್ಯಾಚರಣೆ ವೇಳೆ ೫ ರಿಂದ ೬ ಮಂದಿ ನಕ್ಸಲರ್ ಗುಂಪು ಇತ್ತು ಎಂದು ಹೇಳಲಾಗಿದೆ. ಪರಾರಿ ಆಗಿರುವ ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.