ಕೊರಿಯರ್ ನಲ್ಲಿ ಬಂದ ಹೇರ್ ಡ್ರೈಯರ್ ಸ್ಫೋಟ: ಯೋಧನ ಪತ್ನಿ ಕೈ ಬೆರಳು ಕಟ್!
ಪಕ್ಕದ ಮನೆಗೆ ಕೊರಿಯರ್ ಮೂಲಕ ಬಂದಿದ್ದ ಹೇರ್ ಡ್ರೈಯರ್ ಪರೀಕ್ಷಿಸಲು ಹೋದಾಗ ಸ್ಫೋಟಗೊಂಡು ಮೃತ ಯೋಧನ ಪತ್ನಿಯ ಎರಡೂ ಕೈಗಳು ತುಂಡಾದ ಆಘಾತಕಾರಿ ಘಟನೆ ಬಾಗಲಕೋಟೆಯಲ್ಲಿ ಸಂಭವಿಸಿದೆ.
ಇಳಕಲ್ ನಗರದಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಾಜಿ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಅವರ ಎರಡೂ ಕೈಗಳು ತುಂಡಾಗಿವೆ.
ನೆರೆ ಮನೆಯ ಶಶಿಕಲಾ ಎಂಬುವರ ಹೆಸರು ಮತ್ತು ಮೊಬೈಲ್ ಫೋನ್ ನಂಬರ್ ಹೊಂದಿದ್ದ ಪಾರ್ಸೆಲ್ ಡಿಟಿಡಿಸಿ ಕೊರಿಯರ್ ಮೂಲಕ ಬಂದಿದೆ. ಶಶಿಕಲಾ ಮನೆಯಲ್ಲಿ ಇಲ್ಲದ ಕಾರಣ ಬಸಮ್ಮ ಕೊರಿಯರ್ ಸಂಗ್ರಹಿಸಿದ್ದಾರೆ.
ಅಲ್ಲದೇ ಶಶಿಕಲಾ ಸ್ವಿಚ್ ಹಾಕಿ ಹೇರ್ ಡ್ರೈಯರ್ ಚೆಕ್ ಮಾಡುವಂತೆ ಕೇಳಿದ್ದಾರೆ. ಆಗ ಬಸಮ್ಮ ಸ್ವಿಚ್ ಹಾಕುತ್ತಿದ್ದಂತೆ ಹೇರ್ ಡ್ರೈಯರ್ ಸ್ಫೋಟಗೊಂಡಿದ್ದು, ಎರಡೂ ಕೈಗಳ ಬೆರಳುಗಳು ಕತ್ತರಿಸಿ ಹೋಗಿವೆ.
ಬಸಮ್ಮ ಅವರನ್ನು ಇಳಕಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಶಶಿಕಲಾ ಅವರನ್ನು ವಿಚಾರಿಸಿದಾಗ ನಾನು ಹೇರ್ ಡ್ರೈಯರ್ ಆರ್ಡರ್ ಮಾಡೇ ಇಲ್ಲ. ಆದರೆ ನನ್ನ ಹೆಸರಲ್ಲಿ ಹೇರ್ ಡ್ರೈಯರ್ ಬಂದಿದೆ. ಆರ್ಡರ್ ಮಾಡಿದವರು ಯಾರು? ಎಲ್ಲಿಂದ ಹೇರ್ ಡ್ರೈಯರ್ ಬಂತು ಎಂದು ಪೊಲೀಸರಿಂದ ತನಿಖೆ ನಡೆದಿದೆ.
ಹೇರ್ ಡ್ರೈಯರ್ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬಂದಿರುವುದು ದೃಢಪಟ್ಟಿದೆ. ಇಳಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಸಮ್ಮ ಅವರ ಪತಿ ಪಾಪಣ್ಣ 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಮೃತಪಟ್ಟಿದ್ದರು. ಶಶಿಕಲಾ ಅವರ ಪತಿ ಕೂಡ ಯೋಧರಾಗಿದ್ದಾರೆ ಎಂದು ತಿಳಿದು ಬಂದಿದೆ.