ಬಿಪಿಎಲ್ ಅನರ್ಹರು ಎಪಿಎಲ್ ಗೆ ಬದಲಾವಣೆ ಅಷ್ಟೇ: ಕೆ.ಹೆಚ್ ಮುನಿಯಪ್ಪ
ಬಿಪಿಎಲ್ಗೆ ಅರ್ಹರಲ್ಲದವರ ಚೀಟಿಗಳನ್ನು ಎಪಿಎಲ್ಗೆ ಬದಲಾಯಿಸುತ್ತೇವೆ ಹೊರತು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ಆದರೆ, ಎಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ, ನಾವು ಹೇಳಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದರು.
ಕೋಲಾರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಕ್ಷಿಣ ಭಾರತದ ಯಾವುದೇ ರಾಜ್ಯಗಳಲ್ಲಿ ಶೇ.೫೦ರಷ್ಟು ಬಿಪಿಎಲ್ ಕಾರ್ಡುಗಳು ಇಲ್ಲ. ಕರ್ನಾಟಕವು ಆರ್ಥಿಕವಾಗಿ ಸುಭದ್ರವಾಗಿ ಇರುವ ರಾಜ್ಯವಾಗಿದ್ದು, ತೆರಿಗೆ ಕಟ್ಟುವುದರಲ್ಲಿ ಮಹಾರಾಷ್ಟçದ ನಂತರದ ಸ್ಥಾನ ನಮ್ಮ ರಾಜ್ಯಕ್ಕಿದೆ ಈಗಿದ್ದರೂ ಶೇ.೭೫ ರಿಂದ ೮೦% ಬಿಪಿಎಲ್ ಕಾರ್ಡುಗಳು ಇರುವುದಕ್ಕೆ ಸಾಧ್ಯವೇ ಎನ್ನುವ ಪ್ರಶ್ನೆ ಉದ್ಭವವಾಯಿತು. ಇದು ಈ ಸರಕಾರದಲ್ಲಿ ಅಲ್ಲ, ಸುಮಾರು ೧೦ ವರ್ಷಗಳ ಹಿಂದೆಯಿಂದ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ಅಲ್ಲದೆ ಬಿಜೆಪಿ ಸರಕಾರ, ಮೈತ್ರಿ ಸರಕಾರದಲ್ಲಿಯೂ ಚರ್ಚೆಗಳಾಗಿವೆ. ಹೀಗಾಗಿ ಬಿಪಿಎಲ್ಗೆ ಅರ್ಹರಲ್ಲದವರನ್ನು ಎಪಿಎಲ್ಗೆ ಬದಲಾಯಿಸಬೇಕಗುತ್ತದೆ ಎಂದರು.
ಆದಾಯ ತೆರಿಗೆ ಪಾವತಿಸುವವರು, ಸರಕಾರಿ ಕೆಲಸದಲ್ಲಿ ಇರುವವರು, ವಾರ್ಷಿಕ ಆದಾಯ ೧.೨೦ ಲಕ್ಷರೂ ಮೇಲ್ಪಟ್ಟಿದ್ದರೆ ಅಂತಹವರನ್ನು ಗುರುತಿಸಿ ಎಪಿಎಲ್ನಲ್ಲಿ ಇಡಲಾಗುತ್ತದೆ ಹೊರತು ಯಾವುದೇ ಕಾರ್ಡನ್ನು ರದ್ದು ಮಾಡುವುದಿಲ್ಲ. ಗುರುವಾರ (ಇಂದು) ಅಂಕಿಅಂಶಗಳ ಸಮೇತ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಒಂದು ವೇಳೆ ಬಡವರಿಗೆ ತೊಂದರೆಯಾದಲ್ಲಿ ತಹಸೀಲ್ದಾರ್ ಗಮನಕ್ಕೆ ತಂದು ಒಂದು ವಾರದೊಳಗಾಗಿ ಸಮಸ್ಯಯೆ ಬಗೆಹರಿಸಲಾಗುವುದು. ಆರೋಗ್ಯದ ಸೌಲಭ್ಯ ಎಲ್ಲರಿಗೂ ನೀಡಲಾಗುತ್ತದೆ ಎಂದು ತಿಳಿಸಿದರು.
ಗ್ಯಾರೆಂಟಿ ಯೋಜನೆಗಳ ಹೊರೆ ತಪ್ಪಿಸಲು ಕಾರ್ಡ್ಗಳನ್ನು ರದ್ದುಪಡಿಸಲಾಗುತ್ತಿದೆ ಎನ್ನುವುದು ಬಿಜೆಪಿಯವರ ಆರೋಪವಾಗಿದೆ. ಸರಕಾರಕ್ಕೆ ಆರ್ಥಿಕವಾಗಿ ತೊಂದರೆಯಿಲ್ಲ. ಈಗಾಗಲೇ ೮೦೦೦ ಕೋಟಿರೂ ಡಿಬಿಟಿ ಹಣವನ್ನು ನೀಡಲಾಗಿದೆ. ಸಿಎಂ ಅವರು ಅನೇಕ ಬಾರಿ ಬಜೆಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಆರ್ಥಿಕ ವಿಚಾರಗಳು ಎಲ್ಲವೂ ಗೊತ್ತಿದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ರಾಜ್ಯ ಸರಕಾರವು ಯಾವುದೇ ಸಾಲ ಮಾಡಿಲ್ಲ, ಹಿಂದಿನ ಸರಕಾರ ಮಾಡಿದ್ದ ಸಾಲ ತೀರಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ರೈತರು, ಸ್ವಸಹಾಯ ಸಂಘಗಳು ಬರುತ್ತವೆ. ನಬಾರ್ಡ್ನಿಂದ ಸರಿಯಾದ ರೀತಿಯಲ್ಲಿ ಹಣ ನೀಡದ ಹಿನ್ನೆಲೆಯಲ್ಲಿ ಸಾಲ ನೀಡಲಾಗುತ್ತಿಲ್ಲ ಎನ್ನುವುದರ ಬಗ್ಗೆ ಈಗಾಗಲೇ ಸಚಿವರು ತಿಳಿಸಿದ್ದಾರೆ. ಸಿಎಂ ಸಹ ಅದಕ್ಕೆ ಪತ್ರ ಬರೆಯಲಿದ್ದು, ಕಾನೂನು ಬದ್ಧವಾಗಿ ನಬಾರ್ಡ್ನವರು ರಾಜ್ಯಕ್ಕೆ ನೀಡಬೇಕಿದೆ ಎಂದು ಆಗ್ರಹಿಸಿದರು.
ಮುಡಾ ಬಗ್ಗೆ ವಿಚಾರಣೆ ನಡೆಯುವ ವೇಳೆ ನಾನು ಏನೂ ಮಾತನಾಡುವುದಿಲ್ಲ. ತನಿಖೆ ಮುಗಿಯುತ್ತಿದ್ದಂತೆಯೇ ಸತ್ಯ ಹೊರಗೆ ಬರುತ್ತದೆ, ಸಿದ್ದರಾಮಯ್ಯರದ್ದು ಪಾತ್ರ ಏನೂ ಇಲ್ಲ. ಒಂದು ಪತ್ರ ಬರೆದಿಲ್ಲ, ಒಂದು ಫೋನ್ ಕಾಲ್ ಮಾಡಿಲ್ಲ. ಆದರೆ, ಬಿಜೆಪಿಯವರು ರಾಜಕೀಯವಾಗಿ ತೇಜೋವಧೆ ಮಾಡಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮಾಜಿ ಸ್ಪೀಕರ್ ಅರಣ್ಯ ಭೂಮಿ ಒತ್ತುವರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ. ರಮೇಶ್ಕುಮಾರ್ ಆಗಲಿ ಯಾರೇ ಆಗಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ಕಾನೂನು ಕ್ರಮವಾಗಲಿದೆ. ಸರಕಾರವಿದೆ, ಸಮಯಕ್ಕೆ ಸರಿಯಾದ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಬಿಪಿಎಲ್ ನಡುವೆ ಕಾರ್ಮಿಕ ಕಾರ್ಡುಗಳು ರದ್ದಾಗಿಲ್ಲ. ಉಪ ಚುನಾವಣೆ ಫಲಿತಾಂಶ ಒಂದೆರೆಡು ದಿನ ಇರುವಾಗ ಅದರ ಬಗ್ಗೆ ಮಾತನಾಡುವುದಿಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರ ನ್ಯಾಯಾಲಯದಲ್ಲಿದೆ ಹೀಗಾಗಿ ಅದರ ಬಗ್ಗೆಯೂ ಮಾತನಾಡಲ್ಲ. ಗ್ಯಾರೆಂಟಿಗಳಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿಲ್ಲ, ಎಲ್ಲ ಕಡೆ ಕೆಲಸಗಳು ಆರಂಭವಾಗಿವೆ. ಕಳೆದ ವರ್ಷ ಸ್ವಲ್ಪ ಹಿನ್ನೆಡೆಯಾಗಿದ್ದು, ಈಗ ಸರಿಯಾಗಿದೆ. ಅನುದಾನಕ್ಕೆ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಭೈರತಿ ಸುರೇಶ್ ವಿರುದ್ಧ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಸಮಧಾನ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಕೆ.ಎಚ್.ಎಂ., ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆಂಬ ಆಶಾಭಾವನೆಯಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ವಕ್ತಾರ ಎಲ್.ಎ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ಬಾಬು, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಮುಂತಾದವರಿದ್ದರು.