biggboss ಮತದಾನ ಮಾಡಲು ಬಾರದ ಚುನಾವಣಾ ರಾಯಭಾರಿ ಹನುಮಂತ: ಹೆತ್ತವರಿಂದ ಮತದಾನ!
ಹಾವೇರಿ: ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಸ್ವೀಪ್ ಕಾರ್ಯಕ್ರಮದ ಚುನಾವಣಾ ರಾಯಭಾರಿ ಆಗಿದ್ದ ಗಾಯಕ ಹನುಮಂತ ಲಮಾಣಿ ಈ ಬಾರಿಯ ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನಕ್ಕೆ ಗೈರಾಗಿದ್ದಾರೆ.
ಅವರ ತಂದೆ-ತಾಯಿ, ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬುಧವಾರ ಮತದಾನ ಮಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹನುಮಂತ ಅವರು ಚುನಾವಣೆ ರಾಯಭಾರಿ ಆಗಿ ಮತದಾನ ಜಾಗೃತಿ ಮೂಡಿಸಿದ್ದರು. ಆದರೆ ಈ ಬಾರಿ ಮತದಾನ ಮಾಡದೆ ಗೈರು ಆಗಿದ್ದಾರೆ.
ಸವಣೂರು ತಾಲ್ಲೂಕು ಚಿಲ್ಲೂರು ಬಡ್ನಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆ 117 ರಲ್ಲಿ ಹನುಮಂತ ಮತ ಇದೆ. ಆದರೆ ಈ ಬಾರಿ ಅವರು 'ಬಿಗ್ಬಾಸ್' ರಿಯಾಲಿಟಿ ಶೋ ಮನೆಯಲ್ಲಿದ್ದಾರೆ. ಹೀಗಾಗಿ ಮತದಾನ ಮಾಡಲು ಬಂದಿಲ್ಲ. ತಂದೆ ಮೇಘಪ್ಪ, ತಾಯಿ ಶೀಲವ್ವ ಹಾಗೂ ಸಹೋದರಿ ಮತಗಟ್ಟೆಗೆ ಬಂದು ಮತದಾನ ಮಾಡಿದರು.
ಹನುಮಂತ ಬಿಗ್ಬಾಸ್ನಲ್ಲಿ ಇದ್ದಾನೆ. ಅವನನ್ನು ಸಂಪರ್ಕಿಸಲು ನಮಗೆ ಆಗುವುದಿಲ್ಲ. ನಾವಷ್ಟೇ ಬಂದು ಮತದಾನ ಮಾಡಿದ್ದೇವೆ ಎಂದು ಹನುಮಂತ ಅವರ ತಂದೆ ಮೇಘಪ್ಪ ಹೇಳಿದರು.
ಕಳೆದ ಚುನಾವಣೆ ಮತದಾನದ ಜಾಗೃತಿ ಮೂಡಿಸಿದ್ದ ಹನುಮಂತ ಅವರನ್ನು ಜಿಲ್ಲಾಡಳಿತ ಕರೆಸಿಕೊಂಡು ಈ ಚುನಾವಣೆಯೂ ಮತದಾನ ಮಾಡಿಸುವ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸಬೇಕಿತ್ತು ಎಂಬ ಮಾತುಗಳು ಗ್ರಾಮದಲ್ಲಿ ಕೇಳಿ ಬಂದವು.