ಕೆಜಿಎಫ್ನಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿಗೆ ಸಚಿವ ಬೈರತಿ ಸುರೇಶ ಸೂಚನೆ
ಬೆಂಗಳೂರು: ಕೋಲಾರ ಜಿಲ್ಲೆಯ ಕೆಜಿಎಫ್ ನಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ [Integrated Township] ಯೋಜನೆ ನಿರ್ಮಾಣಕ್ಕೆ ಸಂಬಂಧಿಸಿ ವಿಸ್ತೃತ ಯೋಜನೆ ವರದಿಯನ್ನು ತಯಾರಿಸುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿಎಸ್ ಸುರೇಶ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧಿಕಾರಿಗಳು, ಕೆಜಿಎಫ್ ಮತ್ತು ಬಂಗಾರಪೇಟೆ ತಹಶೀಲ್ದಾರ್ ಹಾಗೂ ಕೆ.ಜಿ.ಎಫ್ ನಗರಾಭಿವೃದ್ಧಿ ಆಯುಕ್ತರು ಹಾಗೂ ಕೆಜಿಎಫ್ ನಗರ ಯೋಜನಾ ಆಯುಕ್ತರ ಉನ್ನತ ಮಟ್ಟದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಆಯ-ವ್ಯಯ ಮಂಡನೆ ವೇಳೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಕೋಲಾರ ಚಿನ್ನದ ಗಣಿ ಪ್ರದೇಶ (ಕೆಜಿಎಫ್), ಬಳ್ಳಾರಿ ಮತ್ತು ತುಮಕೂರಿನ ವಸಂತ ನರಸಾಪುರದಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣದ ಬಗ್ಗೆ ಘೋಷಿಸಿದ್ದಾರೆ. ಅಂತೆಯೇ ಕೋಲಾರ ಜಿಲ್ಲೆಯ ಕೆ.ಜಿ.ಎಫ್ ಪಟ್ಟಣದಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಮಾಡಲು ನಗರಾಭಿವೃದ್ಧಿ ಇಲಾಖೆ ಮುಂದಡಿ ಇಟ್ಟಿದೆ ಎಂದರು.
ಕೆಜಿಎಫ್ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣಕ್ಕಾಗಿ ಬಿಜಿಎಂಎಲ್ ಸುಪರ್ಧೀಯಲ್ಲಿರುವ ರಾಜ್ಯ ಸರ್ಕಾರದ ಸುಮಾರು 960 ಎಕರೆ ಜಮೀನು ಇದ್ದು, ಇದರಲ್ಲಿ ಕೆ.ಜಿ.ಎಫ್ ತಾಲ್ಲೂಕಿನಲ್ಲಿ ಬಂಗಾರದ ಗಣಿ ಗ್ರಾಮದ ಸರ್ವೆ ನಂ.3 ರಲ್ಲಿ 294 ಎಕರೆ ಜಾಗವನ್ನು ಗುರುತಿಸಲಾಗಿದೆ.
ಬಿಇಎಂಎಲ್ ಸುಪರ್ಧೀಯಲ್ಲಿದ್ದ ಕೆಲವು ಎಕರೆ ಜಾಗವನ್ನು ನಗರಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಉಳಿದ ಜಮೀನನ್ನು ಪಡೆಯಲು ಕ್ರಮ ವಹಿಸುವಂತೆ ಮಾನ್ಯ ನಗರಾಭಿವೃದ್ಧಿ ಸಚಿವರು ಸೂಚಿಸಿದರು.
ಚೆನೈ-ಬೆಂಗಳೂರು ಎಕ್ಸ್ಪ್ರೇಸ್ ಹೆದ್ದಾರಿ ಕೆ.ಜಿ.ಎಫ್ ಮೂಲಕ ಹಾದು ಹೋಗಿದ್ದು, Integrated Township ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗದಿಂದ 2.5 ಕಿ.ಮೀ ಅಂತರದಲ್ಲಿದೆ. ಎಕ್ಸ್ಪ್ರೇಸ್ ಹೆದ್ದಾರಿಯಿಂದ Township ಗೆ ನೇರ ಸಂಪರ್ಕ ಕಲ್ಪಿಸಲು ಸಾಧ್ಯವೇ ಎಂಬುವುದನ್ನು ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರಾದ ಬೈರತಿ ಸುರೇಶ ಸೂಚಿಸಿದರು.
ಎಕ್ಸ್ಪ್ರೆಸ್ ಹೆದ್ದಾರಿಯ ಮೂಲಕ ಇಂಟಿಗ್ರೇಟೆಡ್ ಟೌನ್ ಶಿಪ್ ಗೆ ನೇರ ರಸ್ತೆ ಕಲ್ಪಿಸಲು ಸಾಧ್ಯವಾಗದಿದ್ದಲ್ಲಿ, ಸರ್ವಿಸ್ ರಸ್ತೆ, ಎತ್ತರಿಸಿದ (Elevated) ರಸ್ತೆ ಅಥವಾ ಮ್ಯಾಜಿಕ್ ಬಾಕ್ಸ್ ಮೂಲಕ ರಸ್ತೆ ನಿರ್ಮಾಣ ಮಾಡಲು ಸಾಧ್ಯವಿದೆಯೇ ಎನ್ನುವುದನ್ನು ಸಮೀಕ್ಷೆ ಮಾಡಿ ಅದಷ್ಟು ಬೇಗ ವರದಿ ನೀಡುವಂತೆ ಕೆ.ಜಿ.ಎಫ್ ನಗರ ಯೋಜನಾ ಪ್ರಾಧಿಕಾರದ ಆಯುಕ್ತರಿಗೆ ಸಚಿವ ಬೈರತಿ ಸುರೇಶ ಸೂಚಿಸಿದರು.
ಕೆಜಿಎಫ್ ನಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಮಾಡಲು ತಗಲುವ ವೆಚ್ಚ ಎಷ್ಟಾಗುತ್ತದೆ ಎನ್ನುವುದರ ಬಗ್ಗೆ ವಿಸ್ತೃತ ವರದಿಯನ್ನು ನೀಡಲು ಮತ್ತು ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣದ ಬಗ್ಗೆ ವಿಸ್ತೃತ ವರದಿಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ಸೂಚಿಸಿದರು. ಇದಕ್ಕಾಗಿ ಖಾಸಗಿ ಕಂಪನಿಗಳನ್ನು ಆಹ್ವಾನಿಸಲು ಟೆಂಡರ್ ಕರೆಯಲು ಸಹ ಸಚಿವ ಬೈರತಿ ಸುರೇಶ ಸೂಚಿಸಿದರು.
ವಸತಿ ಯೋಜನೆ, ಕೈಗಾರಿಕೆಗಳು, ಆರೋಗ್ಯ ಘಟಕಗಳು ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಮುಂಗಟ್ಟುಗಳು, ಬ್ಯಾಂಕ್ಗಳು, ಉದ್ಯಾನವನ, ಮನೋರಂಜನ ತಾಣಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ, ಸದರಿ ಯೋಜನೆಯಿಂದಾಗಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಮತ್ತು ಉತ್ತಮ ವಸತಿ ಯೋಜನೆಯ ವಿಭಿನ್ನ ಹಾಗೂ ವಿಶಿಷ್ಟವಾದ ಇಂಟಿಗ್ರೇಟೆಡ್ ಟೌನ್ ಶಿಪ್ ಅನ್ನು ಕೆಜಿಎಫ್ ನಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧ ಹಾಗೂ ಹಣಕಾಸು ನಿಗಮದ ಅಧ್ಯಕ್ಷರು ಹಾಗೂ ಬಂಗಾರಪೇಟೆ ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಎಂ. ದೀಪ, ಕೆ.ಯು.ಐ.ಡಿ.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕರು ಬಿ. ಶರತ್, ಮುಖ್ಯ ಅಭಿಯಂತರ ನಂದೀಶ್ ಕುಮಾರ್, ಬಂಗಾರಪೇಟೆ ಮತ್ತು ಕೆ.ಜಿ.ಎಫ್ ತಹಶೀಲ್ದಾರ್, ಕೆ.ಜಿ.ಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.