ನೀತಿ ಸಂಹಿತೆ ಎಫೆಕ್ಟ್: ಕಾರ್ಯಕ್ರಮದಲ್ಲಿ ಭಾಗವಹಿಸದ ವಿ.ಐ.ಪಿಗಳು

ಮೈಸೂರು: ಚುನಾವಣಾ ಮಾದರಿ ನೀತಿ ಸಂಹಿತೆ ಪರಿಣಾಮ, ದಸರಾದಲ್ಲಿ ಪಾಲ್ಗೊಳ್ಳಲು ಜನಪ್ರತಿನಿಧಿಗಳಲ್ಲಿ ಜಿಜ್ಞಾಸೆ ಆರಂಭವಾಗಿದೆ. ನಗರದಲ್ಲಿ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಮೂರು ಪ್ರಮುಖ ಕಾರ್ಯಕ್ರಮಗಳಿಂದ ಸಚಿವರು, ಶಾಸಕರು ದೂರ ಉಳಿದರು.

ಸರಸ್ವತಿಪುರಂ ಈಜುಕೊಳದಲ್ಲಿ ಆಯೋಜಿಸಿದ್ದ ಟ್ರಯ್ಲಾಥಾನ್ , ಹಾಪ್ ಆನ್ ಹಾಪ್ ಆಫ್, ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ನಡೆದ ಗ್ರಾವೆಲ್ ಫೆಸ್ಟ್ ಗೆ ಚಾಲನೆ ಕೊಡಬೇಕಿತ್ತು. ಆದರೆ, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಪಾಲ್ಗೊಳ್ಳ ಲಿಲ್ಲ.

ಈ ಸಂಬಂಧ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕೆ.ಆರ್.ನಗರ ವಿಧಾನಸಭಾಕ್ಷೇತ್ರ ಸೇರಿದ್ದರೂ, ಚುನಾವಣೆ ನಡೆ ಯುವ ಜಿಲ್ಲೆಗಳಲ್ಲಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಹಾಗಾಗಿ, ಮೈಸೂರು, ಶಿವಮೊಗ್ಗ, ಮಂಡ್ಯ ಜಿಲ್ಲೆಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆದರೆ ಪೂರ್ವ ನಿಗದಿಯಂತೆ ನಾಡಹಬ್ಬ ದಸರಾ ನಡೆಯುತ್ತಿರುವುದರಿಂದ ಹಾಗೂ ಸಾಂಸ್ಕೃತಿಕ ಹಬ್ಬವಾಗಿರುವುದರಿಂದ ಕೆಲವು ಸ್ಪಷ್ಟನೆ ಕೋರಿ ಆಯೋಗಕ್ಕೆ ಪತ್ರ ಬರೆಯ ಲಾಗುತ್ತದೆ ಎಂದರು.

ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಚಿವರು ದಸರಾ ಕಾರ್ಯಕ್ರಮಗಳಲ್ಲಿ ಸದ್ಯಕ್ಕೆ ಭಾಗಿಯಾಗಲು ಸಾಧ್ಯವಿಲ್ಲವೆಂದು ಮನವರಿಕೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಹೊತ್ತಿಗೆ ಆಯೋಗದಿಂದ ಬರುವ ಪ್ರತಿಕ್ರಿಯೆ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

Leave a Reply

Your email address will not be published. Required fields are marked *